ಕ್ರಿಕೆಟ್ ಕಿಟ್, ಹೊಲಿಗೆ ಯಂತ್ರಗಳ ಆಮಿಷ ಒಡ್ಡಿ ರವಿಶಂಕರ್ ಕಾರ್ಯಕ್ರಮಕ್ಕೆ ಜನ ಸೇರಿಸಿದ ಸಂಘಟಕರು: ಆರೋಪ
ಭಾಷಣ ಆರಂಭವಾಗುತ್ತಲೇ ಹೊರ ನಡೆದ ಸಭಿಕರು

ಶ್ರೀನಗರ, ಮಾ. 11: ಇಲ್ಲಿ ಶನಿವಾರ ಆಯೋಜಿಸಲಾಗಿದ್ದ ಆರ್ಟ್ ಆಫ್ ಲಿವಿಂಗ್ ಸ್ಥಾಪಕ ರವಿಶಂಕರ್ ಅವರ ಕಾರ್ಯಕ್ರಮ ಒಂದನ್ನು ಸಭಿಕರ ತೀವ್ರ ಅಸಮಾಧಾನದ ನಡುವೆ ಅರ್ಧದಲ್ಲೇ ಮೊಟಕುಗೊಳಿಸಿದ ಘಟನೆ ವರದಿಯಾಗಿದೆ.
ಇಲ್ಲಿ ನಡೆದಿದ್ದ ಪೈಗಾಮಿ ಇ ಮೊಹಬ್ಬತ್ (ಪ್ರೀತಿಯ ಸಂದೇಶ) ಎಂಬ ಹೆಸರಿನ ಕಾರ್ಯಕ್ರಮವೊಂದರಲ್ಲಿ ರವಿಶಂಕರ್ ಭಾಗವಹಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವರು ತಮಗೆ ಆಮಿಷಗಳನ್ನು ಒಡ್ಡಿ ಈ ಕಾರ್ಯಕ್ರಮಕ್ಕೆ ಕರೆತರಲಾಗಿತ್ತು ಎಂದು ದೂರಿದ್ದಾರೆ.
ಇಲ್ಲಿನ ಶೇರೆ ಕಾಶ್ಮೀರ ಇಂಟರ್ ನ್ಯಾಷನಲ್ ಕನ್ವೆಂಷನ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರವಿಶಂಕರ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ಜನರು ಎದ್ದು ಪ್ರಾಂಗಣದಿಂದ ಹೊರನಡೆಯ ತೊಡಗಿದರು. ಕೆಲವರು ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಲ್ಲ ಎಂಬ ಘೋಷನೆಗಳನ್ನು ಕೂಗಿದರು.
ಉತ್ತರ ಕಾಶ್ಮೀರದಿಂದ ಬಂದ ಕೆಲವು ಯುವಕರು ತಮಗೆ ಎನ್ ಜಿ ಒ ಒಂದರಿಂದ ಉಚಿತ ಕ್ರಿಕೆಟ್ ಕಿಟ್ ಗಳನ್ನು ನೀಡಲಾಗುವುದು ಎಂದು ಹೇಳಿ ಕರೆದುಕೊಂಡು ಬರಲಾಗಿತ್ತು ಎಂದು ಹೇಳಿದ್ದಾರೆ.
"ಇಂತಹ ಕಾರ್ಯಕ್ರಮಗಳು ರಾಜಕೀಯ ಪ್ರೇರಿತವಾಗಿರುತ್ತದೆ. ನಾವು ಇಂತಹ ಕಾರ್ಯಕ್ರಮಕ್ಕೆ ಬಂದಿದ್ದು, ನಮ್ಮ ನೆರೆಹೊರೆಯವರಿಗೆ ಗೊತ್ತಾದರೆ ನಮಗೆ ತೀವ್ರ ಮುಜುಗರ ಉಂಟಾಗುತ್ತದೆ" ಎಂದು ಒಬ್ಬ ಯುವಕ ದೂರಿದ್ದಾರೆ.
ಇನ್ನೋರ್ವ ಮಹಿಳೆ ಮಾತನಾಡಿ "ನಮಗೆ ಉಚಿತ ಹೊಲಿಗೆಯಂತ್ರಗಳನ್ನು ಹಾಗು ಕೌಶಲ್ಯ ಕೇಂದ್ರಗಳಿಂದ ಸರ್ಟಿಫಿಕೇಟ್ ಗಳನ್ನು ನೀಡುತ್ತೇವೆ ಎಂದು ಕರೆದುಕೊಂಡು ಬಂದಿದ್ದಾರೆ. ರವಿಶಂಕರ್ ಗೆ ನಿಜವಾಗಿಯೂ ಕಾಶ್ಮೀರಿಗಳ ಮೇಲೆ ಪ್ರೀತಿ ಇದ್ದರೆ ನಮ್ಮ ವಿರುದ್ಧ ಕೇಂದ್ರ ಸರಕಾರ ಬುಲೆಟ್ ಹಾಗು ಪೆಲೆಟ್ ಗಳನ್ನು ಬಳಸದಂತೆ ತಡೆಯಲಿ" ಎಂದು ಹೇಳಿದರು.
ಕುಪ್ವಾರದಿಂದ ಬಂದ ಇನ್ನೋರ್ವ ಹಿರಿಯ ನಾಗರಿಕ "ಪರಿಶಿಷ್ಟ ಜನಾಂಗಗಳಿಗೆ ಯಾವುದಾದರೂ ಯೋಜನೆಗಳನ್ನು ಪ್ರಕಟಿಸುತ್ತಾರೆ. ಅದಕ್ಕಾಗಿ ಗುಜ್ಜರ್ ನಾಯಕರೊಬ್ಬರು ಬರುತ್ತಾರೆ ಎಂದು ನಾವು 100 ಕಿಮೀ ಪ್ರಯಾಣ ಮಾಡಿ ಬಂದಿದ್ದೇವೆ. ಬೆಳಗ್ಗಿನಿಂದ ನೀರು, ಆಹಾರ ಇಲ್ಲದೆ ಕಾಯುತ್ತಿದ್ದೇವೆ" ಎಂದು ದೂರಿದ್ದಾರೆ.
ತನ್ನನ್ನು ಕಾರ್ಯಕ್ರಮಕ್ಕೆ ಯಾರು ಆಹ್ವಾನಿಸಿದ್ದರು ಎಂಬುದನ್ನು ರವಿಶಂಕರ್ ಕೂಡ ಸರಿಯಾಗಿ ಹೇಳಲಿಲ್ಲ. ಶೇಖ್ ಇಮ್ರಾನ್ ಎಂಬ ಉದ್ಯಮಿ ಈ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಹೇಳಲಾಗಿದೆ. ಅವರನ್ನು ಕೇಳಿದಾಗ ತಾನು ಯಾವುದೇ ಆಮಿಷ ಜನರಿಗೆ ಒಡ್ಡಿಲ್ಲ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ವಿವಾದದ ಕುರಿತು ಇತ್ತೀಚೆಗೆ ಮಾತನಾಡಿದ್ದ ರವಿಶಂಕರ್ ಆಯೋದ್ಯೆಯ ವಿವಾದಿತ ಜಾಗದ ಮೇಲಿನ ಹಕ್ಕನ್ನು ಮುಸ್ಲಿಮರು ಬಿಟ್ಟು ಕೊಡಬೇಕು ಇಲ್ಲದಿದ್ದರೆ ಭಾರತದಲ್ಲಿ ಸಿರಿಯಾದಂತಹ ವಾತಾವರಣ ಸೃಷ್ಠಿಯಾಗಲಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಕೋಮು ಸೌಹಾರ್ದ ಕದಡುವ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.







