ಮಾದಿಗ ಅಭಿವೃದ್ಧಿ ನಿಗಮ ಸ್ಥಾಪನೆ: ಹಿರಿಯ ವಕೀಲ ಶಂಕರಪ್ಪ ಸ್ವಾಗತ
ಬೆಂಗಳೂರು, ಮಾ.11: ರಾಜ್ಯ ಸರಕಾರ ಮಾದಿಗ ಅಭಿವೃದ್ಧಿ ನಿಗಮ ಸ್ಥಾಪಿಸುವ ನಿರ್ಧಾರಕ್ಕೆ ಮೀಸಲಾತಿ ರಕ್ಷಣಾ ಒಕ್ಕೂಟದ ಮುಖಂಡ ಹಾಗೂ ಹಿರಿಯ ವಕೀಲ ಶಂಕರಪ್ಪ ಸ್ವಾಗತಿಸಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕವಾಗಿ ಮಾದಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ದಿಸೆಯಲ್ಲಿ ನಿಗಮ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ. ನ್ಯಾ. ಸದಾಶಿವ ಸಮಿತಿ ರಚನೆಯೇ ಸಂವಿಧಾನ ನಡವಳಿಕೆಗೆ ವಿರುದ್ಧ ಮತ್ತು ಕಣ್ಣೊರೆಸುವ ತಂತ್ರವಾಗಿದ್ದರಿಂದ ಹಿಂದುಳಿದಿದ್ದ ಮಾದಿಗ ಸಮುದಾಯಕ್ಕೆ ನ್ಯಾಯ ಸಿಗುತ್ತಿರಲಿಲ್ಲ. ಅಲ್ಲದೇ ಪರಿಶಿಷ್ಟರ ನಡುವೆ ದಾಯಾದಿ ಕಲಹ ತಂದಿಡುವ ಹುನ್ನಾರ ಇದಾಗಿತ್ತು ಎಂದು ಅವರು ಹೇಳಿದ್ದಾರೆ.
ನ್ಯಾ. ಸದಾಶಿವ ಸಮಿತಿ ರಚನೆ ಹಾಗೂ ವರದಿಯು ಸಂವಿಧಾನ ಪರಿಚ್ಛೇಧ 341(2), ಹಾಗೂ 15 ಮತ್ತು 16ನೇ ನಿಯಗಳಿಗೆ ವಿರುದ್ಧವಾಗಿದೆ. ಒಳಮೀಸಲಾತಿ ನಿರ್ಧಾರ ಸಂಸತ್‌ಗೆ ಹೊರತುಪಡಿಸಿ ರಾಜ್ಯ ಸರಕಾರ ಇಲ್ಲವೇ ಯಾವುದೇ ಸಮಿತಿಗೆ ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆಂಧ್ರ ಸರಕಾರ ಮತ್ತು ಚಿನ್ನಪ್ಪ ಪ್ರಕರಣ: 2005, ಸುಪ್ರೀಂ-162, ಮಹರಾಷ್ಟ್ರ ಸರಕಾರ ಮತ್ತು ಮಿಲಿಂದ್ ಪ್ರಕರಣ-2000, ಸುಪ್ರೀಂ 429, ಸೂರತ್ ವಲ್ಹಾದ್ ಕೆಎಂಜಿ ಪರಿಷದ್ ಮತ್ತು ಕೇಂದ್ರ ಸರಕಾರದ ನಡುವಿನ ಪ್ರಕರಣ. ಸುಪ್ರೀಂ ಎಐಆರ್-2007 ಇವುಗಳಿಗೆ ಸಂಬಂಧಿತ ಆದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರ್ಪಡೆ ಮತ್ತು ಬೇರ್ಪಡೆ ಕುರಿತು ಸ್ಪಷ್ಟ ಆದೇಶ ನೀಡಿದೆ.
ಇದೇ ವಿಷಯವಾಗಿ ಟ್ವೀಟ್ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಗಮನಸೆಳೆದು ಸಂವಿಧಾನ ಬಾಹಿರ ಮತ್ತು ಕಾನೂನು ವಿರುದ್ಧವಾದ ನಡವಳಿಕೆಯಿಂದ ಅನ್ಯಾಯ ಆಗಲಿದೆಯೇ ಹೊರತು ನ್ಯಾಯ ದೊರಕುವುದಿಲ್ಲ, ಹೀಗಾಗಿ ಮಾದಿಗ ಸಮುದಾಯದ ಅಭಿವೃದ್ದಿಗೆ ನಿಗಮ ರಚಿಸುವಂತೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ದಾಯಾದಿ ಕಲಹಕ್ಕೆ ಅಂತ್ಯ ಹಾಡಿದೆ ಎಂದು ಹೇಳಿದ್ದಾರೆ.
ನ್ಯಾ. ಸದಾಶಿವ ವರದಿ ಜಾರಿಗೊಳಿಸಿದಲ್ಲಿ 2ಎ, 2ಬಿ ಮತ್ತು 3ಎ ವರ್ಗಗಳು ಮೀಸಲಾತಿ ಕೇಳಲು ಅವಕಾಶಗಳಿದ್ದವು. ಇದರಿಂದ ಜಾತಿ-ಜಾತಿಗಳ ನಡುವೆ ದಾಯಾದಿ ಕಲಹಕ್ಕೆ ಕಾರಣವಾಗುತ್ತಿತ್ತು. ಮಾದಿಗ ಅಭಿವೃದ್ದಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಮುದಾಯದ ಅಭಿವೃದ್ದಿಗೆ ನ್ಯಾಯ ಕಲ್ಪಿಸಿಕೊಡುವಂತೆ ಶಂಕರಪ್ಪ ಆಗ್ರಹಿಸಿದ್ದಾರೆ.







