ಧರ್ಮ ಸಂಸತ್ ಪ್ರಜಾಪ್ರಭುತ್ವದ ವಿರೋಧಿ: ಪ್ರೊ.ಜಿ.ಕೆ.ಗೋವಿಂದರಾವ್

ಬೆಂಗಳೂರು, ಮಾ.10: ಪ್ರಜಾಪ್ರಭುತ್ವವನ್ನು ನಾವೆಲ್ಲರೂ ನಿಜವಾದ ಸಂಸತ್ ಎಂದು ನಂಬಿದ್ದೇವೆ. ಆದರೆ, ಬಿಜೆಪಿಯ ಅಂಗ ಸಂಸ್ಥೆ ಧರ್ಮ ಸಂಸತ್ ಅಂತರ್ಜಾತಿ ವಿವಾಹ, ಮೀಸಲಾತಿ ವಿರೋಧಿಸುವ ಮೂಲಕ ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಪುರಭವನದಲ್ಲಿ ಕೆ.ಎಸ್.ಪುಣ್ಣಯ್ಯ ವೇದಿಕೆಯಲ್ಲಿ ದಸಂಸ ‘ಎತ್ತ ಸಾಗುತ್ತಿದೆ ಭಾರತ? ಅಂಬೇಡ್ಕರ್ ಚಿಂತನೆಯ ಬೆಳಕಲ್ಲಿ ವಿಶ್ಲೇಷಣೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾ ಸಂಸತ್ತನ್ನು ವಿರೋಧಿಸಿ ಧರ್ಮ ಸಂಸತ್ತನ್ನು ಬೆಂಬಲಿಸುವ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀ ಸೇರಿದಂತೆ ಇತರೆಲ್ಲ ಸ್ವಾರ್ಥ ಸ್ವಾಮಿಗಳನ್ನು ನಂಬಬೇಡಿ ಹಾಗೂ ಅವರ ಕಾಲುಗಳಿಗೆ ಬಿದ್ದು ನಮಸ್ಕರಿಸಬೇಡಿ ಎಂದು ಸಲಹೆ ನೀಡಿದರು.
ಪೇಜಾವರ ಶ್ರೀಗಳು ಭಗವದ್ಗೀತೆಯ ವಿಚಾರಗಳನ್ನು ದಲಿತ ಕಾಲನಿಗಳಿಗೆ ಬಿತ್ತುತ್ತೇನೆ ಎಂದು ಹೇಳುತ್ತಾರೆ. ಅದರ ಬದಲಾಗಿ, ದಲಿತ ಸಾಹಿತ್ಯದ ಪುಸ್ತಕಗಳನ್ನೇ ಮಠದಲ್ಲಿಟ್ಟುಕೊಂಡು ಪಾಠ-ಪ್ರವಚನ ನೀಡಿದರೆ ಸಮ ಸಮಾಜದ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದು ಗೋವಿಂದರಾವ್ ಸೂಚಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಠಗಳಿಗೆ ಕೋಟ್ಯಂತರ ರೂ. ಜನತೆಯ ತೆರಿಗೆ ಹಣವನ್ನು ನೀಡಿದರು. ಆದರೆ, ಈ ಹಣ ಅವರ ಅಪ್ಪನ ಮನೆಯದ್ದೇ ಎಂದು ಪ್ರಶ್ನಿಸಿದ ಗೋವಿಂದರಾವ್, ಬಿಎಸ್‌ವೈ ಜನತೆಯ ತೆರಿಗೆ ಹಣವನ್ನೇ ಮಠಗಳಿಗೆ ನೀಡಿ ನಮಗೆ ಅನ್ಯಾಯ ಎಸಗಿದ್ದಾರೆಂದು ಕಿಡಿಕಾರಿದರು.
ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಮತ ನೀಡಿ ಎಂದು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಸಮಾನತೆಯನ್ನು ವಿರೋಧಿಸುವವರು ಈ ಹೇಳಿಕೆಗಳನ್ನೂ ವಿರೋಧಿಸಿದರು ಎಂದು ಅವರು ಹೇಳಿದರು.
ಮಠಗಳಿಗೆ ಹೋಗಿ ಸಮಾನತೆಯ ಬಗ್ಗೆ ಮಾತನಾಡಿದರೆ ಸ್ವಾಮೀಜಿಗಳು ಈ ಸಮಾನತೆಯ ಮಾತುಗಳನ್ನು ಸಹಿಸುವುದಿಲ್ಲ. ಅಲ್ಲದೆ, ಬಸವಣ್ಣ, ರಾಮಕೃಷ್ಣ ಪರಮಹಂಸರಿಗೆ ಯಾರೂ ಕಾವಿಯನ್ನು ಹಾಕಿಕೊಳ್ಳಿಯೆಂದು ಹೇಳಲಿಲ್ಲ. ಆದರೆ, ಅವರೇ ಈ ಸಮಾಜವನ್ನು ತಿದ್ದುವುದಕ್ಕಾಗಿ ತಮ್ಮದೆ ಆದ ಶೈಲಿಯ ಕಾವಿಯನ್ನು ಹಾಕಿಕೊಂಡು ಸಮಾಜವನ್ನು ತಿದ್ದಿದರು. ಆದರೆ, ಈಗಿನ ಸ್ವಾಮಿಗಳಿಗೆ ಕಾವಿಯನ್ನು ಹಾಕಿಕೊಳ್ಳಲು ಹಾಗೂ ಬಿಚ್ಚಿಡಲು ಹೈಕಮಾಂಡ್‌ನ ಆದೇಶ ಬೇಕಾಗುತ್ತದೆ ಎಂದು ನುಡಿದರು.
ನಮ್ಮ ಹುಟ್ಟು ಜಾತಿ-ಭೇದಗಳನ್ನು ಮಾಡಲು ಅಲ್ಲ. ಬದಲಾಗಿ,ಮನುಷ್ಯನಾಗಿ ಬದುಕಲು, ಸೌಹಾರ್ದವಾಗಿ ಇರಲು. ಆದರೆ, ಇತ್ತೀಚೆಗೆ ಒಂದು ಪಕ್ಷದ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ, ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದ್ದಾರೆಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೇಖಕಿ ಡಾ.ಅನಸೂಯ ಕಾಂಬಳೆ, ದಸಂಸ ಹಿರಿಯ ಮುಖಂಡ ಎನ್.ಮುನಿಸ್ವಾಮಿ ಉಪಸ್ಥಿತರಿದ್ದರು.







