ಅನಾಮಿಕ ವ್ಯಕ್ತಿಗಳಿಂದ ತನಗೆ ಬೆದರಿಕೆ: ಮಲ್ಲಿಕಾರ್ಜುನ ಖರ್ಗೆ ಆತಂಕ

ಕಲಬುರ್ಗಿ, ಮಾ. 11: ಅನಾಮಿಕ ವ್ಯಕ್ತಿಗಳಿಂದ ತನಗೆ ಬೆದರಿಕೆ ಕರೆಗಳು ಬರುತ್ತಿದ್ದು, ನನ್ನನ್ನು ಬೆದರಿಸುವ ಪ್ರಯತ್ನಗಳು ನಡೆದಿವೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ಹೊಸದಿಲ್ಲಿಯ ತುಘಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಜತೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದರು.
ಒಂದೂವರೆ ತಿಂಗಳಿನಿಂದ ದೂರವಾಣಿ ಮೂಲಕ ಅನಾಮಿಕರೊಬ್ಬರು ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದ ಅವರು, ನಾನು ಆರು ವರ್ಷದವನಿದ್ದಾಗಲೇ ಸಾಯಬೇಕಿತ್ತು. ಆದರೆ, 76 ವರ್ಷ ಬದುಕಿದ್ದೇನೆ. ಜನರ ಪ್ರೀತಿ, ವಿಶ್ವಾಸದಿಂದ ಇಷ್ಟು ದಿನ ಬದುಕಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ನುಡಿದರು.
ಅವರೇಕೇ ಬಂದ್ರೋ ಗೊತ್ತಿಲ್ಲ: ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಬಂದಿದ್ದಾರೆಂಬುದು ಗೊತ್ತಿಲ್ಲ. ಅವರನ್ನ ಪಕ್ಷಕ್ಕೆ ಕರೆತಂದವರೇ ಹೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಖೇಣಿಯಿಂದ ಏನು ಲಾಭ ಎಂದು ಅವರೇ ಹೇಳಬೇಕು. ಈ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.







