ಪ್ರಜಾಪ್ರಭುತ್ವ ಕೋಮುವಾದೀಕರಣಗೊಳಿಸುವ ಹುನ್ನಾರ: ನ್ಯಾ.ಎಚ್.ಎಸ್.ನಾಗಮೋಹನ್‌ದಾಸ್
ಬೆಂಗಳೂರು, ಮಾ.11: ದೇಶದಲ್ಲಿಂದು ಪ್ರಜಾಪ್ರಭುತ್ವವನ್ನು ಕೋಮುವಾದೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಅದು ಸಾಧ್ಯವಾಗದಿದ್ದಾಗ ಸಂವಿಧಾನಿಕ ಸಂಸ್ಥೆಗಳನ್ನು ಬಲಹೀನಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾ.ಎಚ್. ಎಸ್.ನಾಗಮೋಹನ್‌ದಾಸ್ ಹೇಳಿದ್ದಾರೆ.
ರವಿವಾರ ನಗರದ ಸೆನೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಬಂಡಾಯ ಸಾಹಿತ್ಯ ನಲವತ್ತರ ಹೆಜ್ಜೆ’ ಕಾರ್ಯಕ್ರಮದಲ್ಲಿ ಜನತಂತ್ರ: ಸೃಜನಶೀಲತೆ ವಿಷಯದ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರು ಸ್ವಾತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಸಂವಿಧಾನದಲ್ಲಿ ವ್ಯಕ್ತಿ ಸ್ವಾತಂತ್ರ ನೀಡಿದೆ.
ಆದರೆ, ಇಂದಿನ ದಿನಗಳಲ್ಲಿ ಸರಕಾರದ ಕ್ರಮಗಳನ್ನು ಟೀಕೆ ಮಾಡಿದರೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ ಅಥವಾ ಅನಗತ್ಯ ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಅಲ್ಲದೆ, ನಕಲಿ ಎನ್‌ಕೌಂಟರ್ ಮಾಡಿ ಸಾಯಿಸುವಂತಹ ಪರಿಸ್ಥಿತಿಯಿದ್ದು, ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ತಾಂಡವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಗತ್ತು ಬಂಡವಾಳಶಾಹಿ ವ್ಯವಸ್ಥೆ ಕಡೆ ವಾಲುತ್ತಿದ್ದು, ಉದ್ಯೋಗ, ಉತ್ಪಾದನೆ, ವಹಿವಾಟು ಕಡಿಮೆಗೊಳ್ಳುತ್ತಿದೆ. ಬ್ಯಾಂಕ್ ಹಾಗೂ ಶೇರು ಮಾರುಕಟ್ಟೆಗಳು ದಿವಾಳಿಯಾಗುತ್ತಿವೆ. ಜಗತ್ತಿನ ಶೇ.50 ರಷ್ಟು ಸಂಪತ್ತು ಕೇವಲ ಶೇ.1ರಷ್ಟು ಜನರ ಕೈನಲ್ಲಿದ್ದರೆ, ಉಳಿದ 50 ರಲ್ಲಿ ಶೇ.20ರಷ್ಟು ಶೇ.20 ಜನರ ಬಳಿಯಿದ್ದು, ಉಳಿದ 20 ರಷ್ಟು ಶೇ.79ರಷ್ಟು ಜನರಿಗೆ ಹಂಚಿಕೆಯಾಗಿದೆ. ವಿಶ್ವದ ಹಲವಾರು ರಾಷ್ಟ್ರಗಳು ಪ್ರಜಾಪ್ರಭುತ್ವದ ರಾಷ್ಟ್ರಗಳು ಎಂದು ಹೇಳಿಕೊಳ್ಳುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಂಡವಾಳಶಾಹಿ ವ್ಯವಸ್ಥೆಯ ಗುಲಾಮರಾಗಿದ್ದಾರೆ ಎಂದು ಹೇಳಿದರು.
ಚುನಾವಣೆಗಳಿಂದು ಜಾತಿ-ಧರ್ಮ, ಹಣ ಹಾಗೂ ದೈಹಿಕ ಬಲದ ಮೇಲೆ ನಡೆಯುತ್ತಿದ್ದು, ಅತಿಹೆಚ್ಚು ಕ್ರಿಮಿನಲ್ ಕೇಸುಗಳು ಹಾಗೂ ಹಣ ಹೊಂದಿರುವವರು ಚುನಾವಣೆಗಳಲ್ಲಿ ಆಯ್ಕೆಯಾಗುತ್ತಿರುವುದು ಆತಂಕಕಾರಿ. ಅಂಕಿ-ಅಂಶಗಳ ಪ್ರಕಾರ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವಂತಹ 543 ಸಂಸದರ ಪೈಕಿ 178 ಮಂದಿಯ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಕೋಟ್ಯಂತರ ರೂ.ಆಸ್ತಿ ಹೊಂದಿರುವವರಾಗಿದ್ದಾರೆ. ಆದರೆ, ಯಾವುದೇ ಕ್ರಿಮಿನಲ್ ಕೇಸಿಲ್ಲದ ಹಾಗೂ ಹಣವಿಲ್ಲದಂತ ಅಭ್ಯರ್ಥಿಗಳು ಡಿಪಾಸಿಟ್ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಧರ್ಮ ಹಾಗೂ ರಾಜಕಾರಣ ಬೇರೆ ಬೇರೆಯಾಗಿರಬೇಕು. ಆದರೆ, ಇಂದು ಧರ್ಮ ರಾಜಕಾರಣವನ್ನು ಕೈಗೆತ್ತಿಕೊಂಡಿದ್ದು, ಧರ್ಮಗಳು ರಾಜಕೀಯವನ್ನು ಮುನ್ನಡೆಸುವಂತಹ ಪರಿಸ್ಥಿತಿ ಬಂದಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದವರಿಂದು ಸಂವಿಧಾನದ ಹುದ್ದೆಯಲ್ಲಿದ್ದು, ಇವರಿಂದ ಪ್ರಜಾಪ್ರಭುತ್ವ, ಜಾತ್ಯಾತೀತ, ಸಾಮಾಜಿಕ ನ್ಯಾಯದ ರಕ್ಷಣೆ ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕೋಮುವಾದ, ಭ್ರಷ್ಟಾಚಾರ ಸಂವಿಧಾನಕ್ಕೆ ಸವಾಲಾಗಿದೆ. ಆದುದರಿಂದಾಗಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಸಾಹಿತಿಗಳು ಮಾಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರೊ.ಸುಕನ್ಯಾ ಮಾರುತಿ, ಬಿ.ಎಂ.ಹನೀಫ್ ಉಪಸ್ಥಿತರಿದ್ದರು.







