ಕ್ಸಿಜಿನ್ ಅಜೀವ ಪರ್ಯಂತ ಚೀನಾದ ಅಧ್ಯಕ್ಷ

ಬೀಜಿಂಗ್,ಮಾ.11: ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರ ಅಧ್ಯಕ್ಷೀಯ ಅಧಿಕಾರಾವಧಿಯನ್ನು ಅಜೀವಪರ್ಯಂತ ವಿಸ್ತರಿಸುವ ಚೀನಾದ ಸಂಸತ್ ರವಿವಾರ ಹಸಿರು ನಿಶಾನೆ ತೋರಿಸಿದೆ.
ಚೀನಾದ ಅಧ್ಯಕ್ಷರ ಗರಿಷ್ಠ ಅಧಿಕಾರಾವಧಿಯನ್ನು ಐದು ವರ್ಷಗಳ ಎರಡು ಅವಧಿಗೆ ಸೀಮಿತಗೊಳಿಸುವ ಕಾನೂನನ್ನು ರದ್ದುಪಡಿಸುವುದಕ್ಕಾಗಿ, ಸಂವಿಧಾನಕ್ಕೆ ತಿದ್ದುಪಡಿ ಮಾಡುವ ನಿರ್ಣಯಕ್ಕೆ ಚೀನಾದ ರಾಷ್ಟ್ರೀಯ ಜನತಾ ಕಾಂಗ್ರೆಸ್ ಅನುಮೋದನೆ ನೀಡಿದೆ. ಸಂವಿಧಾನದ ತಿದ್ದುಪಡಿಯಿಂದಾಗಿ ಕ್ಸಿಜಿನ್‌ಪಿಂಗ್, 2023ರವರೆಗಿದ್ದ ತನ್ನ ಅಧಿಕಾರಾವಧಿಯ ಆನಂತರವೂ ಚೀನಾದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇಂದು ನಡೆದ ಚೀನಾದ ಸಂಸತ್ ಆಗಿರುವ ‘ರಾಷ್ಟ್ರೀಯ ಜನತಾ ಕಾಂಗ್ರೆಸ್’ನ ಅಧಿವೇಶನದಲ್ಲಿ ಸುಮಾರು 3 ಸಾವಿರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.ಅವರಲ್ಲಿ 2958 ಮಂದಿ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದರೆ, ಇಬ್ಬರು ಮಾತ್ರ ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದರು. ಇತರ ಮೂವರು ಗೈರು ಹಾಜರಾಗಿದ್ದರು. ಚಲಾವಣೆಗೊಂಡಿದ್ದ ಒಂದು ಮತವು ಅಸಿಂಧುವಾಗಿತ್ತು.
‘‘ನೂತನ ತಿದ್ದುಪಡಿಯು ಸಂವಿಧಾನವು ಸುಧಾರಣೆಯಾಗುವುದನ್ನು ಹಾಗೂ ಅಭಿವೃದ್ಧಿಗೊಳ್ಳುವುದನ್ನು ಖಾತರಿಪಡಿಸಲಿದೆ ಹಾಗೂ ಚೀನಿ ಅಸ್ಮಿತೆಯೊಂದಿಗೆ ಸಮಾಜವಾದವನ್ನು ಅಭಿವೃದ್ಧಿಪಡಿಸಲು ದೃಢವಾದ ಸಾಂವಿಧಾನಿಕ ಖಾತರಿಯನ್ನು ಒದಗಿಸಲಿದೆ’’ ಎಂದು ನೂತನ ಸಂವಿಧಾನ ತಿದ್ದುಪಡಿಯನ್ನು ಅಂಗೀಕರಿಸಿದ ಬಳಿಕ ಸಂಸತ್‌ನ ಸ್ಥಾಯಿ ಸಮಿತಿಯ ಅಧ್ಯ ಡಾಂಗ್ ಡೆಜಿಯಾಂಗ್ ಅವರು ಸಲ್ಲಿಸಿದ ಲಿಖಿತ ವರದಿ ಹೇಳಿದೆ.
1982ರಲ್ಲಿ ಆಗಿನ ಚೀನಾದ ಅಧ್ಯಕ್ಷ ಡೆಂಗ್ ಕ್ಸಿಯಾವೊ ಪಿಂಗ್ ಅವರು ಅಧ್ಯಕ್ಷೀಯ ಅಧಿಕಾರಾವಧಿಯ ಮಿತಿಯನ್ನು ಐದು ವರ್ಷಗಳ ಎರಡು ಅವಧಿಗೆ ಸೀಮಿತಗೊಳಿಸುವ ಕಾನೂನನ್ನು ಜಾರಿಗೆ ತಂದಿದ್ದರು. 1966-1976ರ ನಡುವಿನ ಅವಧಿಯಲ್ಲಿ ಚೀನಾದ ಅಧ್ಯಕ್ಷರಾಗಿ ಅಜೀವ ಪರ್ಯಂತ ಕಾರ್ಯನಿರ್ವಹಿಸಿದ್ದ ಸರ್ವಾಧಿಕಾರಿ ನಾಯಕ ಮಾವೊ ತ್ಸೆ ತುಂಗ್ ಅವರ ಆಳ್ವಿಕೆಯಲ್ಲಿ ಜನಸಾಮಾನ್ಯರ ಮೇಲೆ ನಡೆದ ಅತಿರೇಕದ ದಬ್ಬಾಳಿಕೆಗಳು ಮರುಕಳಿಸುವುದನ್ನು ತಡೆಯುವ ಉದ್ದೇಶದಿಂದ ಕ್ಸಿಯಾವೊ ಪಿಂಗ್ ಅಧ್ಯಕ್ಷೀಯ ಹುದ್ದೆಯ ಅಧಿಕಾರವಧಿಗೆ ಮಿತಿಯನ್ನು ಹೇರುವ ಕಾನೂನನ್ನು ಜಾರಿಗೊಳಿಸಿದ್ದರು.
64 ವರ್ಷದ ಕ್ಸಿಜಿನ್ ಪಿಂಗ್ 2013ರ ಮಾರ್ಚ್‌ರಂದು ಚೀನಾದ ಅಧ್ಯಕ್ಷರಾಗಿ ಅಧಿಕಾರಕ್ಕೇರಿದ್ದರು. 2017 ಅಕ್ಟೋಬರ್‌ನಲ್ಲಿ ಅವರು ತನ್ನ ಅಧ್ಯಕ್ಷೀಯ ಅಧಿಕಾರದ ಎರಡನೆ ಅವಧಿಯನ್ನು ಆರಂಭಿಸಿದ್ದರು. ಚೀನಾದ ಕಮ್ಯೂನಿಸ್ಟ್ ಪಕ್ಷದ ಮೇಲೆ ಬಲವಾದ ಹಿಡಿತ ಹೊಂದಿರುವ ಕ್ಸಿ ಜಿನ್‌ಪಿಂಗ್ ಅವರು ಮಾವೊತ್ಸೆ ತುಂಗ್ ಯುಗದ ಬಳಿಕ ಚೀನಾದ ಅತ್ಯಂತ ಪ್ರಭಾವಿ ನಾಯಕರೆನಿಸಿದ್ದಾರೆ.
ಚೀನಾದಲ್ಲಿ ಈತನಕ ಅಧ್ಯಕ್ಷರ ಅಧಿಕಾರವಧಿಯನ್ನು ಐದು ವರ್ಷಗಳ ಎರಡು ಅವಧಿಗೆ ಮಿತಗೊಳಿಸಲಾಗಿತ್ತು. ಹೀಗಾಗಿ ಅಧ್ಯಕ್ಷ ಕ್ಸಿಜಿನ್‌ಪಿಂಗ್ 2023ರಲ್ಲಿ ತನ್ನ ಅಧಿಕಾರವನ್ನು ತ್ಯಜಿಸಬೇಕಾಗಿತ್ತು.
ಆದರೆ ನೂತನ ಸಂವಿಧಾನ ತಿದ್ದುಪಡಿಗಳಿಂದಾಗಿ ಅವರು ಅಜೀವಪರ್ಯಂತ ಚೀನಾದ ಅಧ್ಯಕ್ಷರಾಗಿ ಮುಂದುವರಿಯಬಹುದಾಗಿದೆ. ಚೀನಾದ ಅಧ್ಯಕ್ಷರಾಗಿ ಆಡಳಿತದ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವ ಕ್ಸಿಜಿನ್ ಪಿಂಗ್,ಸರಕಾರದ ವಿರುದ್ಧ ಭಿನ್ನಮತದ ಧ್ವನಿಯೆತ್ತಿದ ಸಾಮಾಜಿಕ ಕಾರ್ಯಕರ್ತರು ಹಾಗೂ ನ್ಯಾಯವಾದಿಗಳನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಿ, ಜೈಲಿಗಟ್ಟಿದ್ದರು. ನಾಗರಿಕ ಸಮಾಜದ ಮೇಲೆ ಬಿಗಿಯಾದ ನಿರ್ಬಂಧಗಳನ್ನು ವಿಧಿಸಿರುವ ಅವರು ಅಂತರ್ಜಾಲ ತಾಣವನ್ನು ಸಂಪೂರ್ಣವಾಗಿ ಸರಕಾರದ ಹದ್ದುಬಸ್ತಿನಲ್ಲಿರಿಸಿದ್ದಾರೆ.
ಇದೇ ವೇಳೆ ಭ್ರಷ್ಟಾಚಾರವನ್ನು ಮಟ್ಟಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಚೀನಾದ ಜನಸಾಮಾನ್ಯರ ನಡುವೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕ್ಸಿಜಿನ್ ಪಿಂಗ್ ಅವರ ಭ್ರಷ್ಟಾಚಾರ ವಿರೋಧಿ ಕ್ರಮಗಳಿಂದಾಗಿ ಅವರದೇ ಪಕ್ಷದ ಸಹಸ್ರಾರು ಪದಾಧಿಕಾರಿಗಳು ಶಿಕ್ಷೆಗೊಳಗಾಗಿದ್ದರು ಹಾಗೂ ಅವರ ಪ್ರತಿಸ್ಪರ್ಧಿಗಳು ಕೂಡಾ ಜೈಲುಪಾಲಾಗಿದ್ದರು.







