ತನಿಖಾಧಿಕಾರಿಗಳ ಅಶ್ರದ್ಧೆಯ ಕರ್ತವ್ಯದಿಂದಾಗಿ ಅಮಾಯಕರು ಜೈಲು ಶಿಕ್ಷೆ ಅನುಭವಿಸುತ್ತಾರೆ: ಸೆಷನ್ಸ್ ಕೋರ್ಟ್
ಬೆಂಗಳೂರು, ಮಾ.11: ಸುಳ್ಳು ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಸರ್ವೆ ಸಾಮಾನ್ಯವಾಗಿವೆ. ಆದರೆ, ಅತ್ಯಾಚಾರ ಆರೊಪ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸದಿದ್ದರೆ ಅಮಾಯಕರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸೆಷನ್ಸ್ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸುಳ್ಳು ಕೇಸ್‌ನಿಂದ 7 ತಿಂಗಳಿನಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ದೋಷಮುಕ್ತಗೊಳಿಸಿದೆ.
ಹಣದ ವ್ಯವಹಾರದಲ್ಲಿ ಉಂಟಾಗಿದ್ದ ವೈಮನ್ಸನಿಂದ ಪಶ್ಚಿಮ ಬಂಗಾಳ ಮೂಲದ ದಂಪತಿ ಬೆಂಗಳೂರಿನ ಶ್ರೀನಿವಾಸ್ ಮೇಲೆ ಸುಳ್ಳು ಅತ್ಯಾಚಾರ ಆರೊಪ ಹೊರಿಸಿದ್ದು ಬಹಿರಂಗವಾಗಿದ್ದರಿಂದ ನ್ಯಾಯಾಧಿಶರು, ಶ್ರೀನಿವಾಸ್ ವಿರುದ್ಧದ ಆರೊಪ ಕೈಬಿಟ್ಟಿದ್ದಾರೆ.
ಪ್ರಕರಣವೇನು: 2017ರ ಮೆ 11ರಂದು ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದ ಪಶ್ಚಿಮ ಬಂಗಾಳ ಮೂಲದ ಮಹಿಳೆ, 'ಮಂಜುನಾಥನಗರದ ಗೌಡನಪಾಳ್ಯದಲ್ಲಿ ನನ್ನ ಪತಿ ಜೊತೆ ನೆಲೆಸಿದ್ದೆ. ಮೆಸ್ತ್ರಿ ಶ್ರೀನಿವಾಸ್ ಬಳಿ ಪತಿ ದಿನಗೂಲಿ ಕೆಲಸ ಮಾಡುತ್ತಿದ್ದರು. ನಾವು ವಾಸವಿದ್ದ ಮನೆ ಬದಲಿಸಲು ನಿರ್ಧರಿಸಿದ್ದೆವು. ಅದರಂತೆ ಶ್ರೀನಿವಾಸ್ ಬಳಿ ಪತಿ ತೆರಳಿ ಮುಂಗಡ ಪಾವತಿಸಲು ಹಣ ಕೇಳಿದ್ದರು. ಆಗ ಶ್ರೀನಿವಾಸ್ ನಮ್ಮ ಮನೆ ಒಮ್ಮೆ ನೊಡಲು ಮೆ.9 ರಂದು ಬಂದಿದ್ದ. ಮರು ದಿನ ನನ್ನ ಪತಿಯನ್ನು ಮತ್ತೊಬ್ಬರ ಬಳಿ ಕೂಲಿಗೆ ಕಳುಹಿಸಿ ಮಧ್ಯಾಹ್ನದ ವೇಳೆಗೆ ಮನೆಗೆ ಬಂದು, ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಒಪ್ಪದಿದ್ದಾಗ ಅತ್ಯಾಚಾರ ನಡೆಸಿ, ವಿಷಯ ಯಾರಿಗೂ ತಿಳಿಸದಂತೆ ಬೆದರಿಸಿದ್ದ' ಎಂದು ದೂರಿನಲ್ಲಿ ತಿಳಿಸಿದ್ದರು. ಆ ಮೇರೆಗೆ ಶ್ರೀನಿವಾಸ್‌ನನ್ನು ಬಂಧಿಸಲಾಗಿತ್ತು.
ಅತ್ಯಾಚಾರಕ್ಕೆ ಸೂಕ್ತ ಸಾಕ್ಷಾಧಾರ ಇರದಿದ್ದರೂ, ವೈದ್ಯಕೀಯ ವರದಿಯಲ್ಲಿ ಆರೊಪ ಸಾಬೀತಾಗದಿದ್ದರೂ, ಕೇವಲ ಎಫ್‌ಐಆರ್ ಆಧರಿಸಿ ಶ್ರೀನಿವಾಸ್ ಮೇಲೆ ಪೊಲೀಸರು 2017ರ ಜೂ. 12ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೊಷಾರೊಪ ಪಟ್ಟಿ ಸಲ್ಲಿಸಿದ್ದರು. ಇತ್ತ ದೂರುದಾರ ಮಹಿಳೆ, ಎರಡು ಬಾರಿ ನೊಟಿಸ್ ನೀಡಿದ್ದರೂ ಕೋರ್ಟ್ ಗೆ ಹಾಜರಾಗಿರಲಿಲ್ಲ.
ಇತ್ತೀಚಿಗೆ ಸುಳ್ಳು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಿದ್ದರೂ ಕೇವಲ ದೂರನ್ನಾಧರಿಸಿ ಎಫ್‌ಐಆರ್ ದಾಖಲಿಸಿ, 30 ದಿನಗಳ ಒಳಗೆ ಕೋರ್ಟ್‌ಗೆ ದೋಷಾರೊಪ ಪಟ್ಟಿ ಸಲ್ಲಿಸಲಾಗಿದೆ. ತನಿಖಾಧಿಕಾರಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸದಿದ್ದರಿಂದ ಅಮಾಯಕ 7 ತಿಂಗಳು ನ್ಯಾಯಾಂಗ ಬಂಧನದಲ್ಲಿರುವಂತಾಗಿದೆ.
ಅತ್ಯಾಚಾರ ನಡೆದಿಲ್ಲವೆಂದು ಸ್ಪಷ್ಟಪಡಿಸಿದ ವೈದ್ಯರು: ಮಹಿಳೆಯನ್ನು ತಪಾಸಣೆ ನಡೆಸಿದ್ದ ವೈದ್ಯರು, ಆಕೆಯ ದೇಹದ ಮೇಲಾಗಲಿ, ಗುಪ್ತಾಂಗದ ಮೇಲಾಗಲಿ ಯಾವುದೇ ಗಾಯದ ಗುರುತುಗಳೂ ಇಲ್ಲ. ವಿವಾಹಿತ ಮಹಿಳೆಯಾದ ಕಾರಣ, ಲೈಂಗಿಕ ಸಂಪರ್ಕ ನಡೆಸಿರಬಹುದಾದರೂ ಕಳೆದ 30 ಗಂಟೆಗಳ ಅವಧಿಯಲ್ಲಿ ಮಹಿಳೆಯ ಮೆಲೆ ಯಾವುದೇ ರೀತಿಯ ಬಲವಂತದ ಲೈಂಗಿಕ ಕ್ರಿಯೆ ನಡೆದಿರುವುದು ಕಂಡು ಬಂದಿಲ್ಲ ಎಂದು ವರದಿ ನೀಡಿದ್ದರು. ಶ್ರೀನಿವಾಸನ ವೈದ್ಯಕೀಯ ವರದಿಯಲ್ಲೂ ಆತ ಮಹಿಳೆ ದೂರು ನೀಡಿದ ಸಮಯದಿಂದ ಯಾವುದೇ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಅವರ ಮೈಮೇಲೆ ಯಾವುದೇ ಪರಚಿದ ಗಾಯವಾಗಲಿ, ಹಲ್ಲಿನ ಗುರುತುಗಳಾಗಲಿ ಇಲ್ಲ. ಮೇಲಾಗಿ ಘಟನೆ ಸಂಭವಿಸಿದ ಸಂದರ್ಭ ಅವರು ಧರಿಸಿದ್ದ ಬಟ್ಟೆಯಲ್ಲಿ ವೀರ್ಯದ ಕಲೆ ದೊರೆತಿಲ್ಲ ಎಂದು ವರದಿ ನೀಡಿದ್ದರು.
ದೂರು ಸುಳ್ಳು ಎಂದ ಮಹಿಳೆ: ಎರಡು ವಾರಗಳ ಬಳಿಕ ಡಿಸಿಪಿ ಕಚೇರಿಗೆ ತೆರಳಿದ ಮಹಿಳೆ, ನನ್ನ ಮೆಲೆ ಅತ್ಯಾಚಾರವಾಗಿಲ್ಲ. ನನ್ನ ಗಂಡ ಹಾಗೂ ಶ್ರೀನಿವಾಸ್ ನಡುವೆ ಹಣದ ವಿಚಾರವಾಗಿ ಜಗಳವಾಗಿತ್ತು. ಹೀಗಾಗಿ ಖಾಲಿ ಪತ್ರಕ್ಕೆ ನನ್ನಿಂದ ಸಹಿ ಪಡೆದು, ಸುಳ್ಳು ಅತ್ಯಾಚಾರ ದೂರು ಕೊಡಿಸಿದ್ದಾರೆ. ಹೀಗಾಗಿ ಶ್ರೀನಿವಾಸ್ ವಿರುದ್ಧದ ಪ್ರಕರಣ ಕೈಬಿಡುವಂತೆ ಮನವಿ ಮಾಡಿದ್ದರು.







