13 ವರ್ಷದ ಬಾಲಕಿಯ ಕತ್ತು ಕುಯ್ದು ಹತ್ಯೆಗೈದ ತಂದೆ

ಹೊಸದಿಲ್ಲಿ, ಮಾ. 11: ಮೊಬೈಲ್ ಅಂಗಡಿಯ ಬಾಲಕನೊಂದಿಗೆ ಸ್ನೇಹ ಬೆಳೆಸಿದ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ 13 ವರ್ಷದ ಪುತ್ರಿಯ ಕತ್ತು ಕುಯ್ದು ಹತ್ಯೆಗೈದ ಘಟನೆ ಪೂರ್ವ ದಿಲ್ಲಿಯ ಕಾರವಾಲ್ ನಗರದಲ್ಲಿ ಸಂಭವಿಸಿದೆ. ಕಾರವಾಲ್ ನಗರದ ನಿವಾಸದಿಂದ ಬಾಲಕಿ ಮಾರ್ಚ್ 7ರಂದು ನಾಪತ್ತೆ ಯಾಗಿದ್ದಳು. ಮಾರ್ಚ್ 9ರಂದು ಆಕೆಯ ಮೃತದೇಹ ಗಾಝಿಯಾಬಾದ್ ಲೋನಿಯ ಟ್ರೋನಿಕಾ ನಗರ ಪ್ರದೇಶದ ಚರಂಡಿಯಲ್ಲಿ ಪತ್ತೆಯಾಗಿತ್ತು. ಬಾಲಕನೊಂದಿಗೆ ಸಂಬಂಧ ಇರಿಸಿಕೊಂಡಿರುವುದು ತಿಳಿದು ತಂದೆ ಸುದೇಶ್ ಕುಮಾರ್ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಇದು ಮರ್ಯಾದಾ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಂದೆ ಸುದೇಶ್ ಕುಮಾರ್‌ನನ್ನು ದಿಲ್ಲಿ ಹಾಗೂ ಉತ್ತರಪ್ರದೇಶ ಪೊಲೀಸರ ತಂಡ ಶನಿವಾರ ಬಂಧಿಸಿದೆ. ತಪ್ಪೊಪ್ಪಿಕೊಂಡಿರುವ ಸುದೇಶ್ ಕುಮಾರ್, ತನ್ನ ಮಗಳು ಬಾಲಕನೊಂದಿಗೆ ತಿರುಗಾಡುತ್ತಿರುವುದನ್ನು ನೋಡಿದ್ದೇನೆ. ಮಾರ್ಚ್ 7ರಂದು ಆಕೆ ಅದೇ ಬಾಲಕನೊಂದಿಗೆ ತೆರಳಿದಾಗ ನಾನು ಹಿಂಬಾಲಿಸಿದೆ ಹಾಗೂ ಆಕೆಗೆ ಒಂದು ಪಾಠ ಕಲಿಸಲು ನಿರ್ಧರಿಸಿದೆ ಎಂದು ಹೇಳಿಕೆ ನೀಡಿದ್ದಾರೆ.





