ಕೋಮುವಾದಿಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು: ಸಿದ್ದರಾಮಯ್ಯ

ಬೆಂಗಳೂರು, ಮಾ.11: ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಜೊತೆಗೆ ಕೋಮುವಾದಿಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವಿವಾರ ನಗರದ ಪುರಭವನದ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ, ಎತ್ತ ಸಾಗುತ್ತಿದೆ ಭಾರತ? ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ ವಿಶ್ಲೇಷಣೆ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೋಮುವಾದಿಗಳು ಇಡೀ ದೇಶವನ್ನು ಆಕ್ರಮಿಸಿಕೊಳ್ಳಲು ಹೊರಟಿದ್ದು, ಕರ್ನಾಟಕದ ಮೇಲೆ ದೃಷ್ಟಿನೆಟ್ಟಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ಸಾಮಾಜಿಕ ಅಸಮಾನತೆ ಅನುಭವಿಸುತ್ತಿರುವವರಿಗೆ ನ್ಯಾಯ ಒದಗಿಸಬೇಕೆಂಬ ಆಶಯದೊಂದಿಗೆ ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ದೇಶಕ್ಕೆ ಲಿಖಿತ ಸಂವಿಧಾನ ನೀಡಿದ್ದಾರೆ. ಆರ್ಥಿಕ, ಸಾಮಾಜಿಕ ಅಸಮಾನತೆ ತೊಲಗಿಸಿಲ್ಲ ಅಂದರೆ, ರಾಜಕೀಯ ಸ್ವಾತಂತ್ರಕ್ಕೆ ಅರ್ಥವಿಲ್ಲ ಎಂದು ಹೇಳಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಶಕ್ತಿಗಳಿಂದ ಮನುಷ್ಯತ್ವದ ಮೇಲೆ ಸಾಕಷ್ಟು ದಾಳಿಗಳು ನಡೆಯುತ್ತಿವೆ ಎಂದು ಹೇಳಿದರು.
ಅಂಬೇಡ್ಕರ್‌ರವರು ಲಿಖಿತ ಸಂವಿಧಾನ ರಚಿಸುವುದಕ್ಕೆ ಮುಂಚೆ ನಮ್ಮ ಸಮಾಜದಲ್ಲಿ ಅಲಿಖಿತ ಸಂವಿಧಾನ ಒಂದಿತ್ತು. ಅಸಮಾನತೆ, ಶೋಷಣೆ ಎಲ್ಲವನ್ನೂ ಪೋಷಿಸಲಾಗುತ್ತಿತ್ತು. ಆಗಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದ್ದವು. ಈಗಲೂ ಅದೇ ಶಕ್ತಿಗಳು ಸಂವಿಧಾನ ಬದಲಾವಣೆಗೆ ಆಗ್ರಹಿಸುತ್ತಿವೆ ಎಂದು ಪರೋಕ್ಷವಾಗಿ ಅನಂತಕುಮಾರ್ ಹೆಗಡೆಯನ್ನು ಟೀಕಿಸಿದರು.
ಸಮಾಜದ ಬದಲಾವಣೆಗೆ ಸಂವಿಧಾನ ಬದಲಾವಣೆ ಮಾಡಬೇಕು ಅಂದರೆ ಒಪ್ಪಿಕೊಳ್ಳಬಹುದು. ಆದರೆ ಅವರ ಉದ್ದೇಶ ಅದಲ್ಲ. ಕೇಂದ್ರದ ಸಚಿವರಾಗಿದ್ದವರು ಬಿಜೆಪಿ ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲು ಎನ್ನುತ್ತಾರೆ. ಸಂವಿಧಾನದ ಆಶಯಗಳಿಗೆ ಬದ್ದರಾಗಿ ಇದ್ದವರು ಇದನ್ನು ಕೇಳಿ ಸುಮ್ಮನೆ ಕೂರಬಾರದು ಎಂದು ಹೇಳಿದರು.
ಸಿದ್ದರಾಮಯ್ಯ ರಕ್ತದಲ್ಲಿ ಟಿಪ್ಪು ರಕ್ತ ಹರಿಯುತ್ತಿದೆ ಎನ್ನುತ್ತಾರೆ. ಆರ್.ಎಸ್.ಎಸ್ ಸಂಸ್ಕಾರ ಕಲಿಸಿಕೊಟ್ಟಿದೆ ಅಂತಾರೆ. ಇದೇನಾ ಸಂಸ್ಕಾರ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.
ಗೋ ಹತ್ಯೆ ಬಗ್ಗೆ ಪರವಿರೋಧ ಚರ್ಚೆ ನಡೆಯುತ್ತಿತ್ತು. ನಾನು ಯಾವತ್ತೂ ಗೋ ಮಾಂಸ ಸೇವಿಸಿಲ್ಲ. ತಿನ್ನಬೇಕು ಅಂದರೆ ತಿನ್ನುತ್ತೇನೆ. ನನ್ನ ಆಹಾರದ ಹಕ್ಕನ್ನು ಕೇಳಲು ನೀವ್ಯಾರು?
-ಸಿದ್ದರಾಮಯ್ಯ, ಮುಖ್ಯಮಂತ್ರಿ







