ಕರ್ನಾಟಕ ರಾಜ್ಯ ಕ್ರೀಡಾ ನೀತಿ -2018 ಬಿಡುಗಡೆ

ಉಡುಪಿ, ಮಾ.11: ರಾಜ್ಯದ ಅಥ್ಲಿಟ್ಸ್‌ಗಳು ಒಲಂಪಿಕ್ಸ್‌ನಲ್ಲಿ ಕನಿಷ್ಠ ನಾಲ್ಕು ಚಿನ್ನದ ಪದಕ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮೊದಲ ಮೂರು ಸ್ಥಾನ ಗಳನ್ನು ಜಯಿಸಬೇಕೆಂಬ ಉದ್ದೇಶದಿಂದ ತಯಾರಿಸಲಾದ ನಾಲ್ಕು ಸ್ಥಂಭಗಳು ಹಾಗೂ 17 ಗುರಿಗಳನ್ನು ಹೊಂದಿರುವ ಮಹತ್ವಾಂಕ್ಷೆಯ ಕರ್ನಾಟಕ ರಾಜ್ಯ ಕ್ರೀಡಾ ನೀತಿ -2018ನ್ನು ರಾಜ್ಯ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಬಿಡುಗಡೆಗೊಳಿಸಿದ್ದಾರೆ.
ಉಡುಪಿಯ ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ರಾಜ್ಯದ ಬೆಂಗಳೂರು, ಕಲ್ಬುರ್ಗಿ, ಬೆಳಗಾವಿ ಮತ್ತು ಉಡುಪಿಯಲ್ಲಿ ರಾಜ್ಯ ಎಲ್ಲ ಪ್ರಮುಖರ, ಕ್ರೀಡಾಸಕ್ತರ ಸಭೆ ಕರೆದು ಅಭಿಪ್ರಾಯ ಪಡೆದು ಎಲ್ಲ ಇಲಾಖೆಗಳೊಂದಿಗೆ ಚರ್ಚಿಸಿ ತಯಾರಿಸಲಾದ ಕ್ರೀಡಾ ನೀತಿಗೆ ಮಾ. 8ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಕ್ರೀಡಾನೀತಿಯ ಮುಖ್ಯಾಂಶಗಳು: ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಭ್ಯಾಸಗಳನ್ನು ಕ್ರೀಡೆ ಮತ್ತು ಕ್ರೀಡಾ ಪ್ರಾಧಿಕಾರಗಳಲ್ಲಿ ಅಳವಡಿಸಿ ಕೊಳ್ಳುವುದು. ಕ್ರೀಡಾ ಕ್ಷೇತ್ರದಲ್ಲಿ ಮೋಸ ವಂಚನೆಗಳನ್ನು ತಡೆಗಟ್ಟುವ ಮತ್ತು ಕ್ರೀಡಾ ಒಗ್ಗಟ್ಟನ್ನು ಬೆಳೆಸುವ ನಿಟ್ಟಿನಲ್ಲಿ ನಿಯಮ ಮತ್ತು ಅಗತ್ಯವಾದ ಕಾನೂನುಗಳನ್ನು ರೂಪಿಸಲಾಗುವುದು.
ರಾಜ್ಯದ ಜಿಡಿಪಿಗಾಗಿ ಕ್ರೀಡಾ ಉದ್ದಿಮೆ, ಕ್ರೀಡಾ ವ್ಯಾಪಾರ, ಕ್ರೀಡಾ ಉದ್ಯಮಶೀಲತೆಯನ್ನು ಸುಮಾರು 5000 ಕೋಟಿ ರೂ.ನಷ್ಟು ವಾರ್ಷಿಕವಾಗಿ ಒದಗಿಸಲಾಗುವುದು. ಕರ್ನಾಟಕ ಕ್ರೀಡಾ ಪ್ರಾಧಿಕರವನ್ನು ಬಲಪಡಿಸಲಾಗು ವುದು. ಬೆಂಗಳೂರನ್ನು ಪ್ರಮುಖ ರಾಷ್ಟ್ರೀಯ ಕ್ರೀಡಾ ಹಬ್ ಆಗಿ ಅಭಿವೃದ್ಧಿ ಪಡಿಸಿ ಪ್ರಪಂಚದ ಮೊದಲ 10 ಸ್ಥಾನಗಳಲ್ಲಿರುವಂತೆ ಮಾಡಲಾಗುವುದು.
ರಾಜ್ಯದ ಪ್ರತಿಯೊಂದು ತಾಲೂಕು, ನಗರಸಭೆಯು ಕನಿಷ್ಟ ಒಂದು ಸಮು ದಾಯ ಕ್ರೀಡಾ ಕೇಂದ್ರ ಸ್ಥಾಪನೆ, ಪ್ರತಿಯೊಂದು ಜಿಲ್ಲೆಯಲ್ಲಿ ಬಹು ಕ್ರೀಡಾ ತರಬೇತಿ ಕೇಂದ್ರ, ಒಲಂಪಿಕ್ ಗುಣಮಟ್ಟದ ಈಜುಕೊಳ, ಅಗತ್ಯವಾದ ಸಲಕರಣೆಗಳು, ನುರಿತ ಪರಿಣಿತ ತರಬೇತಿದಾರರು, ಆಡಳಿತ ಮಾಹಿತಿ ವ್ಯವಸ್ಥೆ ಮಾಡಲಾಗುವುದು. 18 ವರ್ಷ ಮತ್ತು ಮೇಲ್ಪಟ್ಟ ಕ್ರೀಡಾಪಟುಗಳಿಗಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಸೌಲಭ್ಯಗಳನ್ನು ಒಳಗೊಂಡ ಕ್ರೀಡಾ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ರಾಜ್ಯದಲ್ಲಿ ಅರ್ಹ ಕ್ರೀಡಾ ತರಬೇತುದಾರರ ಸಂಖ್ಯೆಯನ್ನು ಅಗತ್ಯಾನುಸಾರ ಕಾಲಕಾಲಕ್ಕೆ ಹೆಚ್ಚಿಸಲಾಗುವುದು. ಕ್ರೀಡಾ ವಿಜ್ಞಾನಕ್ಕೆ ಸಂಬಂಧಿಸಿ ಫಿಸಿಯೋ ಥೆರಪಿಸ್ಟ, ವೈದ್ಯರು ಮತ್ತು ಮನೊವೈಜ್ಞಾನಿಕ ಸಲಹೆಗಾರರನ್ನು ಒಳಗೊಂಡ ಕೇಂದ್ರವನ್ನು ಸ್ಥಾಪಿಸುವುದು. ಮತ್ತು ಶೇ.100ರಷ್ಟು ಮಕ್ಕಳು ಅಂದರೆ 6-14 ವರ್ಷದ ಮಕ್ಕಳು ದಿನಕ್ಕೆ ಕನಿಷ್ಟ ಅರ್ಧ ಗಂಟೆ ದೈಹಿಕ ಚಟುವಟಿಕೆ/ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು. ಅವರಿಗೆ ಹಾಲು, ಮೊಟ್ಟೆ ಅಥವಾ ಹಣ್ಣುಗಳನ್ನು ನೀಡುವುದು.
ಶೈಕ್ಷಣಿಕ ನೆರವು: ಕ್ರೀಡಾಪಟುಗಳಿಗೆ ಪ್ರತಿಯೊಂದು ವಿಷಯಗಳಲ್ಲೂ ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೂ(ಸಾಧನೆಗೆ ಅನುಗುಣ ವಾಗಿ ಪ್ರತಿಯೊಂದು ವಿಷಯದಲ್ಲೂ ಅಂತಾರಾಷ್ಟ್ರೀಯ 25, ರಾಷ್ಟ್ರೀಯ 15 ಮತ್ತು ರಾಜ್ಯ 10ಗರಿಷ್ಠ ಅಂಕಗಳು) ಹೆಚ್ಚುವರಿ ಅಂಕ(ಗ್ರೇಸ್ ಮಾರ್ಕ್ಸ್)ಗಳನ್ನು ನೀಡಲಾಗುವುದು. ತರಬೇತಿ ಮತ್ತು ಸ್ತರ್ಧೆಗಳಲ್ಲಿ ಭಾಗವಹಿಸುವ ಸಮಯದಲ್ಲಿ ಹಾಜರಾತಿಯಲ್ಲಿ ರಿಯಾಯಿತಿ ನೀಡಲಾಗುವುದು.
ಪರೀಕ್ಷೆ ಮತ್ತು ಸ್ಪರ್ಧೆಗಳ ದಿನಾಂಕಗಳು ಒಂದೇ ದಿನ ಬಂದಲ್ಲಿ ಕ್ರೀಡಾಪಟು ಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದು. ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮೂಲಕ ಕ್ರೀಡಾ ಮೀಸಲಾತಿ ಅಡಿಯಲ್ಲಿ ಕ್ರೀಡಾಪಟುಗಳಿಗೆ ಪ್ರವೇಶಾತಿ ನೀಡ ಲಾಗುವುದು.
ಪಿಂಚಣಿ ಯೋಜನೆ: ಎಲ್ಲಾ ಮಾಜಿ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆ ಮತ್ತು ಈ ಯೋಜನೆ ಪ್ರತಿ ಎರಡು ವರ್ಷಗಳಿಗೊಮ್ಮೆ ಪರಿಶೀಲಿ ಸಲ್ಪಡುವುದು. ಒಲಂಪಿಕ್ಸ್/ಪ್ಯಾರಾಲಂಪಿಕ್ಸ್‌ನಲ್ಲಿ ಪದಕ ಅಥವಾ ಏಷಿಯನ್/ ಕಾಮನ್‌ವೆಲ್ತ್ ಆಟಗಳಲ್ಲಿ ಚಿನ್ನದ ಪದಕ ಗೆದ್ದವರಿಗೆ ನಿವೇಶನಗಳ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
ಒಲಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ದರ್ಜೆ-1 ಪತ್ರಾಂಕಿತ ಅಧಿಕಾರಿ ಹುದ್ದೆ ಮತ್ತು ಏಷಿಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ಗೆದ್ದವರಿಗೆಗೆ ಅವರ ವಿದ್ಯಾಭ್ಯಾಸ, ಆಸಕ್ತಿ, ಪರಿಣಿತಿಗೆ ಸಂಬಂಧಪಟ್ಟಂತೆ ಅವರ ಸಾಧನೆಯ ಅನುಸಾರ ರಾಜ್ಯ ಸರಕಾರಿ ಇಲಾಖೆಗಳಲ್ಲಿ ದರ್ಜೆ-2 ಪತ್ರಾಂಕಿತ ಅಧಿಕಾರಿ ಹುದ್ದೆಯನ್ನು ನೇರ ನೇಮಕಾತಿ ಮೂಲಕ ನೀಡಲಾಗುವುದು.
ಇಲಾಖೆಗಳಲ್ಲಿ ಮೀಸಲಾತಿ: ಒಲಂಪಿಕ್‌ನಲ್ಲಿರುವ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಪಟುಗಳಿಗೆ ಅವರ ವಿದ್ಯಾರ್ಹತೆ ಪ್ರಕಾರ ರಾಜ್ಯ ಸರಕಾರದ ಎಲ್ಲಾ ಇಲಾಖೆ, ಮಂಡಳಿ ಮತ್ತು ಕಾರ್ಪೊರೇಷನ್‌ಗಳಲ್ಲಿ ಸಿ ಮತ್ತು ಡಿ ವರ್ಗದಲ್ಲಿ ಶೇ.3ರಷ್ಟು ಮೀಸಲಾತಿ ಕಲ್ಪಿಸಲಾಗುವುದು. ಖಾಸಗಿ ಕ್ಷೇತ್ರಗಳಲ್ಲಿ ಲಾಭದಾಯಕ ವೃತ್ತಿಯನ್ನು ಪಡೆಯಲು ಅನುಕೂಲವಾಗುವಂತೆ ತರಬೇತಿ ಶಿಬಿರ ಮತ್ತು ಉದ್ಯೋಗ ಮೇಳಗಳನ್ನು ನಡೆಸಲಾಗುವುದು. ಖ್ಯಾತ ಕ್ರೀಡಾ ಪಟುಗಳನ್ನು ಬ್ರಾಂಡ್ ಅಂಬಾಸಿಡರ್ಸ್‌ಗಳಾಗಿ ಆಯ್ಕೆ ಮಾಡಲಾಗುವುದು.
ಕಾರ್ಪೊರೇಟ್ ಸಂಸ್ಥೆಗಳು ಕ್ರೀಡೆಯ ಮೇಲೆ ಬಂಡವಾಳ ಹೂಡುವುದನ್ನು ತಮ್ಮ ಸಾಮಾಜಿಕ ಜವಾಬ್ದಾರಿ ಸೇವೆ(ಸಿಎಸ್‌ಆರ್)ಯ ಒಂದು ಭಾಗವನ್ನಾಗಿ ಮಾಡಲಾಗುವುದು. ಕೌಶಲ್ಯ ತರಬೇತಿ ಕಾರ್ಯಕ್ರಮದ ಮೂಲಕ ಮಾಜಿ ಕ್ರೀಡಾಪಟುಗಳ ಸಾಮರ್ಥ್ಯಗಳನ್ನು ವೃದ್ಧಿಸಲಾಗುವುದು. ವಿಶೇಷ ಚೇತನರಿಗಾಗಿ ಕ್ರೀಡೆಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ ಪ್ರತಿಭೆ ಯನ್ನು ಗುರುತಿಸಿ ತರಬೇತಿಯನ್ನು ನೀಡಲಾಗುವುದು.
ಈ ಸಂದರ್ಭದಲ್ಲಿ ಉಡುಪಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಹಾಜರಿದ್ದರು.
ಕ್ರೀಡಾ ಶಿಕ್ಷಣ ಕಡ್ಡಾಯ
ಪ್ರಾಥಮಿಕ ಶಾಲಾ ಮಟ್ಟದಿಂದ ಪದವಿಪೂರ್ವ ಮಟ್ಟದವರೆಗೂ ಪ್ರತಿ ದಿನ 60 ನಿಮಿಷಗಳ ಕಾಲ ಕ್ರೀಡಾ ಶಿಕ್ಷಣವನ್ನು ಕಡ್ಡಾಯಗೊಳಿಸು ವುದು. ಎಲ್ಲಾ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದು. ಪ್ರತಿಭಾ ನ್ವೇಷಣೆಯನ್ನು ಮೂರು ಹಂತಗಳಲ್ಲಿ ನಡೆಸಿ, ಅರ್ಹತೆ ಗಳಿಸಿದ ಅಥ್ಲೀಟ್‌ಗಳು ಕಾರ್ಡೆಡ್ ಅಥ್ಲೀಟ್‌ಗಳಾಗುತ್ತಾರೆ ಮತ್ತು ಇವರು ಅನುದಾನ, ತರಬೇತಿ ಮುಂತಾದ ನೆರವಿಗೆ ಅರ್ಹರಾಗು ತ್ತಾರೆ ಎಂಬುದು ಕೀಡಾ ನೀತಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಚುನಾವಣಾ ನೀತಿ ಸಂಹಿತೆಯ ಭೀತಿ
ನಾಳೆಯಿಂದ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಭೀತಿ ಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ತನ್ನ ಮಹತ್ವಕಾಂಕ್ಷೆಯ ಕ್ರೀಡಾ ನೀತಿ ಯನ್ನು ರಜಾದಿನವಾಗಿರುವ ರವಿವಾರವೇ ಘೋಷಿಸಿದರು.ಬೆಂಗಳೂರಿನಲ್ಲಿ ಘೋಷಿಸಬೇಕಾಗಿದ್ದ ಕ್ರೀಡಾ ನೀತಿಯನ್ನು ಸಚಿವರು ತರಾ ತುರಿಯಲ್ಲಿ ಬೆಂಗಳೂರಿನಿಂದ ಇಂದೇ ಇಮೇಲ್ ಮೂಲಕ ಕ್ರೀಡಾ ನೀತಿಯ ಪ್ರತಿಗಳನ್ನು ತರಿಸಿ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನು ಕರೆದು ಬಿಡುಗಡೆ ಗೊಳಿಸಿದರು.







