ಸೌರಶಕ್ತಿಯ ಗುರಿ ಸಾಧಿಸಲು 65 ಲಕ್ಷ ಕೋಟಿ ರೂ. ಅಗತ್ಯ: ಮ್ಯಾಕ್ರೋನ್

ಹೊಸದಿಲ್ಲಿ, ಮಾ.11: 2030ರ ವೇಳೆಗೆ 1 ಲಕ್ಷ ಕೋಟಿ ವ್ಯಾಟ್ ಸೌರಶಕ್ತಿಯ ಗುರಿ ಸಾಧಿಸಲು 65 ಲಕ್ಷ ಕೋಟಿ ರೂ. ಮೊತ್ತದ ಅಗತ್ಯವಿದೆ ಎಂದು ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಹೇಳಿದ್ದಾರೆ.
ಇಲ್ಲಿ ನಡೆದ ಅಂತಾರಾಷ್ಟ್ರೀಯ ಸೌರಮೈತ್ರಿ(ಐಎಸ್‌ಎ)ಯ ಸಂಸ್ಥಾಪನಾ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಮ್ಯಾಕ್ರೋನ್, ಸರಕಾರ, ಖಾಸಗಿ ಕ್ಷೇತ್ರ ಹಾಗೂ ಪೌರ ಸಂಸ್ಥೆಗಳು ಜೊತೆಗೂಡಿ ಕಾರ್ಯನಿರ್ವಹಿಸುವ ಮೂಲಕ ಈ ಗುರಿ ಸಾಧಿಸಲು ಅಗತ್ಯವಿರುವ ಆರ್ಥಿಕ ಸಂಪನ್ಮೂಲದ ಕ್ರೋಡೀಕರಣ ಹಾಗೂ ಅದಕ್ಕಿರುವ ಅಡ್ಡಿ ನಿವಾರಿಸಬಹುದಾಗಿದೆ ಎಂದರು. ಇದು ಜನಸಾಮಾನ್ಯರ ಒಳಿತಿಗೆ ಹಾಗೂ ಎಲ್ಲಾ ದೇಶಗಳ ಅಭಿವೃದ್ಧಿಗೆ ಪೂರಕವಾದ ಸಂಘಟನೆಯಾಗಿದೆ. ಐಎಸ್‌ಎ ಒಕ್ಕೂಟದ ಸದಸ್ಯ ರಾಷ್ಟ್ರಗಳು ಯೋಜಿತ ಕಾರ್ಯದ ಫಲಿತಾಂಶ ಸಾಧನೆಗಾಗಿ ಸಂಕಲ್ಪಿಸಿದ್ದಾರೆ ಎಂದು ಹೇಳಿದ ಅವರು, ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಕೆಲವು ರಾಷ್ಟ್ರಗಳು ಹಿಂದೆ ಸರಿದಿರುವುದನ್ನು ಪ್ರಸ್ತಾವಿಸಿದರು.
ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಸಿಯಸ್‌ನ ಮಿತಿಯೊಳಗೆ ಇರಿಸಲು ಸಂಕಲ್ಪಿಸಿದ ಸುಮಾರು 200 ರಾಷ್ಟ್ರಗಳು 2015ರಲ್ಲಿ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಅಮೆರಿಕದ ಅಧ್ಯಕ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.
ಐಎಸ್‌ಎಯನ್ನು ಪ್ರತಿನಿಧಿಸಿರುವ ರಾಷ್ಟ್ರಗಳಲ್ಲಿ ಒಟ್ಟಾರೆ ವಿಶ್ವದ ನಾಲ್ಕನೇ ಮೂರರಷ್ಟು ಪ್ರಮಾಣದ ಜನಸಂಖ್ಯೆಯಿದೆ. ಇವರಲ್ಲಿ ಸುಮಾರು ಶೇ.20ರಿಂದ ಶೇ.50ರಷ್ಟು ಜನರಿಗೆ ವಿದ್ಯುತ್‌ಶಕ್ತಿಯ ಸಂಪರ್ಕವೇ ಇಲ್ಲ ಎಂಬುದು ಗಮನಾರ್ಹ ಎಂದು ಮ್ಯಾಕ್ರೋನ್ ಹೇಳಿದರು. ಪ್ರಥಮವಾಗಿ ಪ್ರತೀ ರಾಷ್ಟ್ರದಲ್ಲಿರುವ ಸೌರಶಕ್ತಿ ಸಾಮರ್ಥ್ಯ, ಆ ದೇಶಗಳ ಯೋಜನೆ ಹಾಗೂ ಅದಕ್ಕೆ ಅಗತ್ಯವಿರುವ ಆರ್ಥಿಕ ಆವಶ್ಯಕತೆಗಳನ್ನು ಗುರುತಿಸುವುದು,ಲಭ್ಯ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದು ಹಾಗೂ ಇದಕ್ಕೆ ಅನುಕೂಲಕರ ಚೌಕಟ್ಟು ನೀಡುವುದು- ಈ ಮೂರು ಪ್ರಾಥಮಿಕ ಕಾರ್ಯ ಅಗತ್ಯವಾಗಿ ನಡೆಯಬೇಕಿದೆ ಎಂದವರು ತಿಳಿಸಿದರು. 2022ರೊಳಗೆ ಸೌರಶಕ್ತಿಯ ಲಭ್ಯತೆಯ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಈಡೇರಿಸಲು ಫ್ರೆಂಚ್ ಅಭಿವೃದ್ಧಿ ಮಂಡಳಿ 700 ಮಿಲಿಯನ್ ಯುರೋಗಳನ್ನು ಹೆಚ್ಚುವರಿಯಾಗಿ ವಿನಿಯೋಗಿಸಲಿದೆ. ಆದರೆ 2030ರಲ್ಲಿ 1ಲಕ್ಷ ಕೋಟಿ ವ್ಯಾಟ್ ಸೌರಶಕ್ತಿಯ ಗುರಿ ಮುಟ್ಟಲು ನಮಗೆ ಖಾಸಗಿ ಹೂಡಿಕೆದಾರರ ಅಗತ್ಯವಿದೆ . ಅಲ್ಲದೆ ನವೀಕರಿಸಬಹುದಾದ ಇಂಧನ (ಸೌರಶಕ್ತಿ)ಯಿಂದ ತಯಾರಿಸಲ್ಪಟ್ಟ ಸೌರವಿದ್ಯುತ್ತಿನ ಖರೀದಿ ಮತ್ತು ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸದಸ್ಯ ರಾಷ್ಟ್ರಗಳನ್ನು ಅವರು ಒತ್ತಾಯಿಸಿದರು.
ಸೌರವಿದ್ಯುತ್ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಶ್ಲಾಘಿಸಿದ ಅವರು, ಭಾರತದಲ್ಲಿ ಕಳೆದ ಎರಡು ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನಗಳ ಉತ್ಪಾದನಾ ಸಾಮರ್ಥ್ಯ 39 ಗಿಗಾವ್ಯಾಟ್‌ನಿಂದ 63 ಗಿಗಾವ್ಯಾಟ್‌ಗೆ ಏರಿದ್ದು, ಸೌರವಿದ್ಯುತ್ ಉತ್ಪಾದನೆ ಶೇ.140ರಷ್ಟು ಹೆಚ್ಚಾಗಿದೆ ಎಂದರು. ಇದು ಸಾಧ್ಯ ಎಂದು ಭಾರತ ವಿಶ್ವಕ್ಕೇ ತೋರಿಸಿಕೊಟ್ಟಿದೆ. ಭಾರತವು ಹೂಡಿಕೆದಾರರನ್ನು ಆಕರ್ಷಿಸಿ, ಅವರಿಗೆ ಸಹಕಾರ ನೀಡುತ್ತಿದೆ. ಯುವಜನತೆಗೆ ಸೂಕ್ತ ತರಬೇತಿ ನೀಡುತ್ತಿದೆ. ಭಾರತದ ಈ ಸಾಧನೆ ಸಂಘಟನೆಯ 121 ಸದಸ್ಯ ರಾಷ್ಟ್ರಗಳಿಗೆ ಒಂದು ಮಾದರಿಯಾಗಿದೆ ಎಂದು ಮ್ಯಾಕ್ರೋನ್ ಹೇಳಿದರು.
ವಿಶ್ವದ ಎಲ್ಲಾ ಖಂಡಗಳ ನಾಯಕರು ಕೇವಲ ಭಾಷಣ ಮಾಡುವುದಕ್ಕೆ ಮಾತ್ರ ಇಲ್ಲಿ ಸೇರಿಲ್ಲ. ಭಾಷಣಗಳಲ್ಲಿ ಮಾಡಿದ ಘೋಷಣೆ ಕೆಲವೇ ದಿನಗಳಲ್ಲಿ ಮರೆತುಹೋಗುತ್ತದೆ. ಆದರೆ ನಾವಿಲ್ಲಿ ಒಂದು ನಿರ್ದಿಷ್ಟ ವಿಷಯವನ್ನು ಎದುರು ಇಟ್ಟುಕೊಂಡು , ವಿಶ್ವದಲ್ಲಿ ಸೌರಶಕ್ತಿ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಭೆ ಸೇರಿದ್ದೇವೆ ಎಂದು ಫ್ರಾನ್ಸಿನ ಅಧ್ಯಕ್ಷರು ಹೇಳಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದೇಶಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.







