ದೇವರ ಸಾಕ್ಷಿಯಾಗಿ ಶಿರೂರು ಶ್ರೀ ಸ್ಪರ್ಧಿಸುವುದು ನನಗೆ ಗೊತ್ತಿಲ್ಲ: ಸಚಿವ ಪ್ರಮೋದ್

ಉಡುಪಿ, ಮಾ.11: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವ ಪೂರ್ವ ಸೂಚನೆ ನನಗೆ ಇರಲಿಲ್ಲ. ಇದನ್ನು ನಾನು ದೇವರ ಸಾಕ್ಷಿಯಾಗಿ ಹೇಳುತ್ತಿದ್ದೇನೆ ಎಂದು ಉಡುಪಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಯನ್ನು ಚುನಾವಣೆಗೆ ನಿಲ್ಲಿಸಿ, ಅದನ್ನು ಅಡಗಿಸಿಕೊಟ್ಟುಕೊಳ್ಳುವ ರಾಜಕಾರಣ ವನ್ನು ನಾನು ಮಾಡಲ್ಲ. ಅಂತಹ ವಿಚಾರವನ್ನು ನಾನೇ ಪತ್ರಿಕಾಗೋಷ್ಠಿ ಕರೆದು ಹೇಳುತ್ತಿದ್ದೆ. ಇದರ ಬಗ್ಗೆ ನನಗೆ ಯಾವುದೇ ಪೂರ್ವ ಸೂಚನೆ ಇರಲಿಲ್ಲ ಎಂದರು.
ನಿನ್ನೆ ಸ್ವಾಮೀಜಿ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ಹನುಮಂತ ದೇವರ ಪ್ರೇರಣೆಯಿಂದ ಚುನಾವಣೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು. ನನ್ನನ್ನು ಹೊಗಳಿದವರನ್ನು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಲು ನಾನು ಯಾಕೆ ಹೇಳಬೇಕು ಎಂದು ಸಚಿವರು ಪ್ರಶ್ನಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಹಂತದ ಪ್ರವಾಸ ದಲ್ಲಿ ಕಾರವಾರದಿಂದ ನೇರ ಕಾಪುವಿಗೆ ಆಗಮಿಸಿ ನಂತರ ಮಂಗಳೂರಿಗೆ ತೆರಳಲಿರುವರು. ಮೊದಲ ಪ್ರವಾಸದಲ್ಲಿ ಅವರು ಬೈಂದೂರು, ಕುಂದಾಪುರ, ಉಡುಪಿ ಕ್ಷೇತ್ರಕ್ಕೆ ಆಗಮಿಸುವುದಿಲ್ಲ. ಹಾಗಾಗಿ ಅವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವ ರಾಜ್ ತಿಳಿಸಿದರು.







