ಬಿಜೆಪಿ ಮುಖಂಡನ ಅವಿವೇಕದ ಮಾತು: ಯು.ಟಿ.ಖಾದರ್
ಮಂಗಳೂರು, ಮಾ.11: ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ನನ್ನನ್ನು ಭಯೋತ್ಫಾದಕರು ಎಂದು ಟೀಕಿಸಿರುವುದು ಅವರ ಅವಿವೇಕದ ಮಾತುಗಳಾಗಿವೆ. ಕಾಮಲೆ ಕಣ್ಣಿನವನಿಗೆ ಜಗತ್ತೆಲ್ಲಾ ಹಳದಿಯಾಗಿ ಕಾಣುವಂತೆ ಬಿಜೆಪಿಯವರ ಸ್ಥಿತಿಯಾಗಿದೆ. ನಾವು ಏನು ಎನ್ನುವುದು ಜನತೆಗೆ ಗೊತ್ತಿದೆ. ಬಿಜೆಪಿಯ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ನೀಡಿದ ಹೇಳಿಕೆಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ಪ್ರತಿಕ್ರೀಯೆ ನೀಡಿದ್ದಾರೆ.
ಪ್ರತ್ಯೇಕವಾದಿಗಳೊಂದಿಗೆ ಕೈ ಜೋಡಿಸಿರುವುದು ಬಿಜೆಪಿ:- ಕಾಶ್ಮೀರದಲ್ಲಿ ಪಿಡಿಪಿ, ಅಸ್ಸಾಂನಲ್ಲಿ ಇತ್ತೀಚಿನ ತ್ರಿಪುರ, ನಾಗಾಲ್ಯಾಂಡ್ ಚುನಾವಣೆ ಯಲ್ಲಿ ಪ್ರತ್ಯೇಕವಾದಿಗಳ ಜೊತೆ ಕೈ ಜೋಡಿಸಿರುವ ಬಿಜೆಪಿ ಅಧಿಕಾರಕ್ಕಾಗಿ ಯಾರೊಂದಿಗೂ ಕೈ ಜೋಡಿಸುತ್ತಾರೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಮುಖ್ಯ ಮಂತ್ರಿಯಾಗಲಿ ಸಚಿವರ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಅವರ ಬಳಿ ಇಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬಿಜೆಪಿ ಚುನಾವಣೆ ಹತ್ತಿರ ಬರುತ್ತಿರುವಂತೆ ಸಮಾಜವನ್ನು ವಿಭಜಿಸಿ ಮತ ಪಡೆಯುವ ತಂತ್ರದಲ್ಲಿ ತೊಡಗಿದೆ. ಆದರೆ ಜನತೆಯ ನೆಮ್ಮದಿ ಶಾಂತಿಯನ್ನು ಕದಡಬೇಡಿ ಎಂದು ಬಿಜೆಪಿಯವರ ಬಳಿ ಮನವಿ ಮಾಡುವುದಾಗಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಪುರಸಭಾಧ್ಯಕ್ಷ ಕುಂಞಿ ಮೋನು, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಸಂತೋಷ್ ಶೆಟ್ಟಿ, ಸುರೇಶ್ ಭಟ್ನಗರ್, ರಮೇಶ್ ಶೆಟ್ಟಿ ಬೊಳಿಯಾರ್, ಜಬ್ಬಾರ್, ಅನಿಲ್ ಡಿಸೋಜ, ರಝಾಕ್ ಮೊದಲಾದವರು ಉಪಸ್ಥಿತರಿದ್ದರು.







