ಚಿಕ್ಕಮಗಳೂರು: ವಾಹನ ಸುರಕ್ಷತೆ ಜಾಗೃತಿಗಾಗಿ ಬೈಕ್ ರ‍್ಯಾಲಿ, ಸ್ಟಂಟರ್ಸ್ ಮೀಟ್

ಚಿಕ್ಕಮಗಳೂರು, ಮಾ.11: ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಚಿಕ್ಕಮಗಳೂರು ಇವರ ಸಹಕಾರದಲ್ಲಿ ಶನಿವಾರದಿಂದ ಆರಂಭವಾಗಿರುವ, ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ 32 ಬೈಕ್ ರ್ಯಾಲಿ ಪಟುಗಳು ಭಾಗವಹಿಸಿದ್ದ ಬೈಕ್‍ರ್ಯಾಲಿ ಕಾಫಿ ನಾಡಿನ ಬೈಕ್ ರೇಸ್ ಪ್ರಿಯರ ಮನಸೂರೆಗೊಂಡಿತು.
ನಗರದ ಬೈಪಾಸ್ ರಸ್ತೆಯಲ್ಲಿರುವ ಪಟಾಕಿ ಮಾರಾಟದ ಜಾಗದಲ್ಲಿ ಶನಿವಾರ ರ್ಯಾಲಿ ಅಂಗವಾಗಿ ನಡೆದ ಸೂಪರ್ ಸ್ಪೆಷಲ್ ಹಂತದಲ್ಲಿ ಬೈಕ್ ಸವಾರರ ರೋಮಾಂಚನಕಾರಿ ರೈಡ್ ಸಾರ್ವಜನಿಕರ ಮನಗೆಲ್ಲುವಲ್ಲಿ ಯಶಕಂಡಿದ್ದು, ಫಾರಿನ್ ಬೈಕ್‍ಗಳ ವಿಭಾಗದಲ್ಲಿ ಜೀವನ್ ಪ್ರಥಮ ಸ್ಥಾನ ಪಡೆದರು. ಬುಲೆಟ್ ಬೈಕ್‍ಗಳ ವಿಭಾಗದಲ್ಲಿ ಕೇರಳದ ಶ್ರೀಕಾಂತ್ ಪ್ರಥಮ, ಚಿಕ್ಕಮಗಳೂರಿನ ಪೂರ್ಣೇಶ್, -ಅಜೇಯ್ ದ್ವಿತೀಯ ಹಾಗೂ ಬೆಂಗಳೂರಿನ ಪ್ರಕಾಶ್ ತೃತೀಯ ಬಹುಮಾನ ಪಡೆದರು. ಸ್ಟಾರ್ ಆಫ್ ಚಿಕ್ಕಮಗಳೂರು ವಿಭಾಗದಲ್ಲಿ ಫ್ರಾನ್ಸಿಸ್ ಪ್ರಥಮ, ಸಲ್ಮಾನ್ ದ್ವಿತೀಯ ಹಾಗೂ ಸಮೀರ್ ದ್ವಿತೀಯ ಬಹುಮಾನ ಪಡೆದರು.
ನಗರದ ಎಐಟಿ ಕಾಲೇಜು ಮೈದಾನದಲ್ಲಿ ರವಿವಾರ ನಡೆದ ಇಂಡಿಯಾ ಸ್ಟಂಟರ್ಸ್ ಮತ್ತು ಬೈಕರ್ಸ್ ಮೀಟ್ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಬಂದಿದ್ದ ಬೈಕ್ ಸ್ಟಂಟ್ ಪಟುಗಳು ವಿವಿಧ ಬೈಕ್ ಸಾಹಸ ಪ್ರದರ್ಶಿಸಿದರು. ವಿವಿಧ ಬೈಕ್‍ಗಳಲ್ಲಿ ನೀಡಿದ ಮೈನವಿರೇಳಿಸುವ ಸಾಹಸ ಯುವಕರ ಮನಗೆದ್ದಿತು. ಈ ವೇಳೆ ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್‍ನ ಸದಸ್ಯರಾದ ಧನುಷ್, ಅಭಿಷೇಕ್, ವಿನಯ್, ಆಸೀಮ್, ಜಯೇಂದ್ರ, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು





