ಕಳಸ: ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

ಕಳಸ, ಮಾ ಮಾ.11: ಹೋಬಳಿಯಾದ್ಯಂತ ಯಾವುದೇ ಮುನ್ಸೂಚನೆ ನೀಡದೇ ನಿರಂತರವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಳಸ ಪಟ್ಟಣದ ಮೆಸ್ಕಾಂ ಕಚೇರಿ ಎದುರು ಡಾ.ರಾಜ್ ಕನ್ನಡ ಅಭಿಮಾನಿ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ)ಬಣದ ಕಾರ್ಯಕರ್ತರು ಧರಣಿ ನಡೆಸಿದರು.
ಡಾ.ರಾಜ್ ಕನ್ನಡ ಅಭಿಮಾನಿ ಸಂಘ ಹೋಬಳಿ ಅಧ್ಯಕ್ಷ ರಾಜು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿ ವಿದ್ಯುತ್ ಸಮಸ್ಯೆ ಸ್ಪಂದಿಸದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಾರ್ಯಕರ್ತರು ಪಟ್ಟಣದ ಮೆಸ್ಕಾಂ ಕಚೇರಿ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕತಪಡಿಸಿದರು.
ಹೋಬಳಿಯಾದ್ಯಂತ ನಿರಂತರವಾಗಿ ಯಾವುದೇ ಮುನ್ಸೂಚನೆ ನೀಡದೇ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ರೈತರಿಗೆ, ಅಂಗಡಿ ಮಾಲಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಸದ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ವಿದ್ಯುತ್ ಇಲ್ಲದೇ ರಾತ್ರಿ ವೇಳೆ ದೀಪದ ಬೆಳಕಿನಲ್ಲಿ ಓದುವಂತಾಗಿದೆ. ರಾತ್ರಿ 7 ರಿಂದ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರಾತ್ರಿ 10 ನಂತರ ವಿದ್ಯುತ್ ನೀಡುವ ಮೂಲಕ ಅಕ್ರಮವಾಗಿ ನದಿಯಿಂದ ತೋಟಗಳಿಗೆ ನೀರು ಹಾಯಿಸುವ ದೊಡ್ಡ ದೊಡ್ಡ ಬೆಳೆಗಾರರಿಗೆ ಮೆಸ್ಕಾ ಅಧಿಕಾರಿಗಳು ತೆರೆಮರೆಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ವಿದ್ಯುತ್ ನಿಲುಗಡೆ ಮಾಡುವ ಬಗ್ಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ವಿದ್ಯುತ್ ನಿಲುಗಡೆಯ ಸಮಯವನ್ನು ಬದಲಾಯಿಸಿ ಶಾಲಾ ಮಕ್ಕಳಿಗೆ ಅನುಕೂಲವಾಗುವ ಸಮಯದಲ್ಲಿ ವಿದ್ಯುತ್ ನೀಡಿ, ರಾತ್ರಿ ವೇಳೆ ವಿದ್ಯುತ್ ಕಡಿತ ಅವಶ್ಯವಿದ್ದಲ್ಲಿ ಮಾಡಿಕೊಳ್ಳಿ. ತಪ್ಪಿದಲ್ಲಿ ಆಹೋರಾತ್ರಿ ಇಲಾಖಾ ಕಚೇರಿ ಎದುರು ಧರಣಿ ಮಾಡುತ್ತೇವೆ ಎಂದು ಈ ವೇಳೆ ಧರಣಿ ನಿರತರು ಎಚ್ಚರಿಕೆ ನೀಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ಗ್ರಾಹಕರಾದ ರವಿ ರೈ ಮಾತನಾಡಿ, ಕಳೆದ ಎಂಟತ್ತು ವರ್ಷಗಳಿಂದ ಕಳಸ ಮೆಸ್ಕಾಂನಿಂದ ಬೇಸಿಗೆಯಲ್ಲಿ ಉಂಟಾಗುವ ತೊಂದರೆಯನ್ನು ನಿವಾರಿಸುತ್ತಿಲ್ಲ. ಪ್ರತೀ ಬಾರಿಯೂ ಒಂದಲ್ಲ ಒಂದು ನೆಪವನ್ನು ಹೇಳಿ ಗ್ರಾಹಕರನ್ನು ವಂಚಿಸಲಾಗುತ್ತಿದೆ. ವಿದ್ಯುತ್ ನಿಲುಗಡೆಯ ಬಗ್ಗೆ ಮೆಸ್ಕಾಂ ಹಿರಿಯ ಇಂಜಿನಿಯರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರೆ ಉಢಾಪೆಯ ಮಾತುಗಳನ್ನಾಡುತ್ತಾರೆ. ಗ್ರಾಹಕರಿಗೆ ಇಲಾಖೆಯು ಹತ್ತಿರವಾಗಬೇಕೇ ಹೊರತು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಬಾರದು. ಒಂದು ಕಡೆ ಸರಕಾರ 24 ಗಂಟೆ ವಿದ್ಯುತ್ ಕೊಡುತ್ತಿದ್ದೇವೆ ಎಂದು ಹೇಳುತ್ತಿದೆ, ಇನ್ನೊಂದೆಡೆ ನಿರಂತರವಾಗಿ ವಿದ್ಯುತ್ ಕಡಿತ ಮಾಡುವ ಮೂಲಕ ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮಾಡುತ್ತಿದೆ ಎಂದು ಮೆಸ್ಕಾಂ ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಧರಣಿ ನಿರತರ ಒತ್ತಡಕ್ಕೆ ಮಣಿದ ಮೆಸ್ಕಾ ಇಲಾಖಾ ಅಧಿಕಾರಿಗಳು ವಿದ್ಯುತ್ ಕಡಿತದ ಸಮಯವನ್ನು ಬದಲಾವಣೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಸಂತೋಷ್, ಆನಂದ, ಶ್ಯಾಮಚಾರಿ, ಅವಿನಾಶ್, ಚೌಡಪ್ಪ, ರಂಗಭಟ್, ಜನಾರ್ಧನ, ಕೇಶವ ಮತ್ತಿತರರು ಉಪಸ್ಥಿತರಿದ್ದರು.







