1,700ಕ್ಕೂ ಅಧಿಕ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಪ್ರಕರಣ
ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರಕಾರ

ಚೆನ್ನೈ, ಮಾ. 11: 1,700ಕ್ಕೂ ಅಧಿಕ ಹಾಲಿ ಸಂಸದರು ಹಾಗೂ ಶಾಸಕರು ದೇಶಾದ್ಯಂತದ ನ್ಯಾಯಾಲಯಗಳಲ್ಲಿ 3,045 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ವಿಚಾರಣೆ ಎದುರಿಸುತ್ತಿರುವ ಅತಿ ಹೆಚ್ಚು ಸಂಸದರು, ಶಾಸಕರು ಇರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ತಮಿಳುನಾಡು, ಬಿಹಾರ್ ಹಾಗೂ ಪಶ್ಚಿಮ ಬಂಗಾಳ ಇದೆ. ಉತ್ತರಪ್ರದೇಶದಲ್ಲಿ 248 ಸಂಸದರು ಹಾಗೂ ಶಾಸಕರು ವಿಚಾರಣೆ ಎದುರಿಸುತ್ತಿದ್ದಾರೆ. ತಮಿಳುನಾಡು, ಬಿಹಾರ ಹಾಗೂ ಪಶ್ಚಿಮಬಂಗಾಳದಲ್ಲಿ ಅನುಕ್ರಮವಾಗಿ 178, 144 ಹಾಗೂ 139 ಸಂಸದರು, ಶಾಸಕರು ವಿಚಾರಣೆ ಎದುರಿಸುತ್ತಿದ್ದಾರೆ. ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ 100ಕ್ಕಿಂತ ಅಧಿಕ ಸಂಸದರು ಹಾಗೂ ಶಾಸಕರಿರುವ ಇತರ ಮೂರು ರಾಜ್ಯಗಳೆಂದರೆ ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣ.
ಸುಪ್ರೀಂ ಕೋರ್ಟ್‌ನ ಪ್ರಶ್ನೆಗೆ ಅಫಿದಾವಿತ್ ಸಲ್ಲಿಸಿರುವ ಕೇಂದ್ರ ಸರಕಾರ 2014 ಹಾಗೂ 2017ರ ನಡುವೆ ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿರುವ 1,765ಕ್ಕೂ ಅಧಿಕ ಸಂಸದರು, ಶಾಸಕರುಗಳ ವಿವರಗಳನ್ನು ಬಹಿರಂಗಗೊಳಿಸಿದೆ. ಈ 1,765 ಸಂಸದರು ಹಾಗೂ ಶಾಸಕರು 3,816 ಕ್ರಿಮಿನಲ್ ಪ್ರಕರಣಗಳಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಫಿದಾವಿತ್ ಹೇಳಿದೆ. ಈ ವರ್ಷ ಮಾರ್ಚ್ 5ರ ವರೆಗೆ ವಿವಿಧ ಉಚ್ಚ ನ್ಯಾಯಾಲಯಗಳಿಂದ ಈ ದತ್ತಾಂಶ ಸಂಗ್ರಹಿಸಲಾಗಿದೆ ಎಂದು ಅದು ಹೇಳಿದೆ. 3,816 ಪ್ರಕರಣಗಳಲ್ಲಿ 125 ಪ್ರಕರಣಗಳ ತೀರ್ಪು ಮಾತ್ರ ಒಂದು ವರ್ಷದ ಒಳಗಡೆ ಹೊರಬಿದ್ದಿದೆ.
2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ ಇಂತಹ ಪ್ರಕರಣಗಳ ವಿಚಾರಣೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿತ್ತು. ಆದರೆ, ದತ್ತಾಂಶ ಗಮನಿಸಿದಾಗ ಈ ನಿರ್ದೇಶನ ಉಲ್ಲಂಘಿಸಿರುವುದು ಸ್ಪಷ್ಟ. ಕಳೆದ ಮೂರು ವರ್ಷಗಳಲ್ಲಿ 771 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. 3,045 ಪ್ರಕರಣಗಳು ಬಾಕಿ ಉಳಿದಿವೆ. ಉತ್ತರಪ್ರದೇಶದಲ್ಲಿ 539ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಕೇರಳದಲ್ಲಿ 373 ಪ್ರಕರಣಗಳು ಬಾಕಿ ಇವೆ. ತಮಿಳುನಾಡು, ಬಿಹಾರ, ಪಶ್ಚಿಮಬಂಗಾಳ ಹಾಗೂ ಇತರ ರಾಜ್ಯಗಳಲ್ಲಿ 300ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠದ ಕೋರಿಕೆಗೆ ಅನುಸಾರವಾಗಿ ಕಾನೂನು ಸಚಿವಾಲಯ ಈ ಮಾಹಿತಿ ನೀಡಿದೆ. ಅಪರಾಧಿ ಸಂಸದ, ಶಾಸಕರಿಗೆ ಜೀವಾವಧಿ ನಿಷೇಧ ಹೇರಬೇಕು ಎಂದು ಕೋರಿ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಈ ಪೀಠ ವಿಚಾರಣೆ ನಡೆಸಿತ್ತು.







