ಪ್ರತೀ ಮನಸ್ಸಿನಲ್ಲಿ ಪುಟ್ಟ ಗಾಂಧೀ ಇರಲಿ: ಡಾ.ಎನ್.ಇಸ್ಮಾಯೀಲ್

ಮಂಗಳೂರು, ಮಾ.11: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧಿಯವರ 150ನೆ ಜಯಂತಿಯ ಪ್ರಯುಕ್ತ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಮೌಲ್ಯಗಳನ್ನು ಪರಿಚುಸುವ ಧ್ವನಿ ಬೆಳಕಿನ ಸಾಕ್ಷ್ಯಚಿತ್ರ ಪ್ರದರ್ಶನವು ನಗರದ ರೊಝಾರಿಯೋ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಮತ್ತು ಬದ್ರಿಯಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್ ಉದ್ಘಾಟಿಸಿ, ರಾಷ್ಟ್ರಪಿತನ ಆದರ್ಶ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಸದಾ ಬೇರೂರಿರಬೇಕು. ಪ್ರತಿಯೊಬ್ಬರ ಹೃದಯದಲ್ಲಿ ಒಬ್ಬ ಪುಟ್ಟ ಪಟ್ಟ ಗಾಂಧಿ ನಿರಂತರವಾಗಿ ಮೂಡಿಬರಬೇಕು ಎಂದರು.
ರೊಸಾರಿಯೋ ಶಿಕ್ಷಣ ಸಂಸ್ಥೆಗಳ ಕರೆಸ್ಪಾಂಡೆಂಟ್ ಫಾದರ್ ಜೆ.ಬಿ.ಕ್ರಾಸ್ತಾ ಮಾತನಾಡಿ, ಗಾಂಧೀಜಿಯವರು ಸಹಜೀವನ, ಸಹಬಾಳ್ವೆ ಉತ್ತಮ ನಾಗರೀಕರಾಗಿ ಬಾಳುವ ಸಂದೇಶವನ್ನು ನೀಡಿದ್ದಾರೆ. ಎಲ್ಲರೂ ಶಾಂತಿಯಿಂದ ಸಹಬಾಳ್ವೆಯಿಂದ ಜೀವಿಸಲು ಪ್ರೇರಣೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರೊಝಾರಿಯೊ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜನೇಟ್ ಫೆರ್ನಾಂಡಿಸ್, ಕನ್ನಡ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಭಗಿನಿ ಅಂಟೋನಿ ಮೇರಿ ಉಪಸ್ಥಿತರಿದ್ದರು.ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು.







