ಸಿರಿಯ: ಪೂರ್ವ ಘೌಟ ಇಬ್ಭಾಗ
ವಿಜೃಂಭಿಸುತ್ತಿರುವ ಸರಕಾರಿ ಸೇನೆ; ಬಂಡುಕೋರರಿಗೆ ತೀವ್ರ ಹಿನ್ನಡೆ

►1,000 ಮೀರಿದ ನಾಗರಿಕರ ಸಾವಿನ ಸಂಖ್ಯೆ
ಡೌಮ (ಸಿರಿಯ), ಮಾ. 11: ಬಂಡುಕೋರರ ನಿಯಂತ್ರಣದಲ್ಲಿರುವ ಪೂರ್ವ ಘೌಟದ ಅತಿ ದೊಡ್ಡ ಪಟ್ಟಣವೊಂದನ್ನು ಅದೇ ಪ್ರದೇಶದ ಇತರ ಭಾಗದಿಂದ ಬೇರ್ಪಡಿಸುವಲ್ಲಿ ಸಿರಿಯ ಸರಕಾರಿ ಪಡೆಗಳು ಶನಿವಾರ ಯಶಸ್ವಿಯಾಗಿವೆ.
ಇದು 20 ದಿನಗಳ ಕಾಳಗದಲ್ಲಿ ಸಿರಿಯ ಪಡೆಗಳು ಗಳಿಸಿದ ಅತಿ ದೊಡ್ಡ ಯಶಸ್ಸಾಗಿದೆ. ಈ ಅವಧಿಯಲ್ಲಿ 1,000ಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಫೆಬ್ರವರಿ 18ರಿಂದ ಪೂರ್ವ ಘೌಟವನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಸಿರಿಯದ ಸರಕಾರಿ ಪಡೆಗಳು ತೊಡಗಿಸಿಕೊಂಡಿದ್ದು, ಈವರೆಗೆ ಅರ್ಧಕ್ಕೂ ಹೆಚ್ಚಿನ ಭೂಭಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ.
‘ವಿಭಜಿಸಿ ಗೆಲ್ಲು’ ಎನ್ನುವ ತಂತ್ರಗಾರಿಕೆಯನ್ನು ಅನುಸರಿಸುತ್ತಿರುವ ಸಿರಿಯ ಪಡೆಗಳು, ಪೂರ್ವ ಘೌಟದ ಪ್ರಮುಖ ಪಟ್ಟಣ ಡೌಮವನ್ನು ಯಶಸ್ವಿಯಾಗಿ ಪ್ರತ್ಯೇಕಿಸಿವೆ. ಈ ಬೆಳವಣಿಗೆಯಿಂದ ಬಂಡುಕೋರರು ಭಾರೀ ಹಿನ್ನಡೆ ಅನುಭವಿಸಿದ್ದಾರೆ.
ಸಿರಿಯ ಸೈನಿಕರು ಶನಿವಾರ ಡೌಮ ಪಟ್ಟಣವನ್ನು ಹರಸ್ತ ಪಟ್ಟಣದೊಂದಿಗೆ ಸಂಪರ್ಕಿಸುವ ರಸ್ತೆಯನ್ನು ತುಂಡರಿಸಿದರು ಹಾಗೂ ಮಿಸ್ರಬ ಪಟ್ಟಣವನ್ನು ವಶಪಡಿಸಿಕೊಂಡರು ಎಂದು ಬ್ರಿಟನ್‌ನಲ್ಲಿ ನೆಲೆಸಿರುವ ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ತುಂಬಿ ತುಳುಕುತ್ತಿರುವ ಬಾಂಬ್ ರಕ್ಷಕ ಬಂಕರ್‌ಗಳು
ಡೌಮದ ಪ್ರತಿಪಕ್ಷ ನಿಯಂತ್ರಣದ ಸ್ಥಳೀಯ ಆಡಳಿತವು ಶನಿವಾರ ಅಂತಾರಾಷ್ಟ್ರೀಯ ಸಂಘಟನೆಗಳಿಗೆ ‘ತುರ್ತು ಕರೆ’ ಹೊರಡಿಸಿದೆ.
‘‘ಬಾಂಬ್‌ನಿಂದ ರಕ್ಷಣೆ ಪಡೆಯಲು ಬಳಸಲಾಗುವ ಬಂಕರ್‌ಗಳು ಮತ್ತು ನೆಲಮಾಳಿಗೆಗಳು ತುಂಬಿ ತುಳುಕುತ್ತಿವೆ. ಜನರು ರಸ್ತೆಗಳು ಮತ್ತು ಸಾರ್ವಜನಿಕ ತೋಟಗಳಲ್ಲಿ ಮಲಗುತ್ತಿದ್ದಾರೆ’’ ಎಂದು ಹೇಳಿಕೆ ತಿಳಿಸಿದೆ.
‘‘ಸ್ಮಶಾನಗಳ ಮೇಲೂ ಭೀಕರ ಬಾಂಬ್ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಸತ್ತವರನ್ನು ದಫನ ಮಾಡಲು ಕಷ್ಟವಾಗುತ್ತಿದೆ’’ ಎಂದಿದೆ.







