ಕೊಂಕಣಿ ಯಕ್ಷ ಸಂವಾದ, ಯಕ್ಷಗಾನ ಕಾರ್ಯಾಗಾರ ಉದ್ಘಾಟನೆ

ಮಂಗಳೂರು, ಮಾ.11: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮತ್ತು ಕೊಂಕಣಿ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ನಗರದ ವಿ.ಟಿ. ರಸ್ತೆಯ ಶ್ರೀಕೃಷ್ಣ ಮಂದಿರದಲ್ಲಿ ಕೊಂಕಣಿ ಯಕ್ಷ ಸಂವಾದ ಮತ್ತು ಯಕ್ಷಗಾನ ಕಾರ್ಯಾಗಾರ ರವಿವಾರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಎ.ಜೆ. ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ವೈದ್ಯ ಡಾ. ಸುದೇಶ್ ರಾವ್ ಮನಷ್ಯನಿಗೆ ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿ ಇದ್ದರೆ ಬದುಕು ಹಸನಾಗಲಿದೆ. ಯಕ್ಷಗಾನವು ಕರಾವಳಿ ಪ್ರದೇಶದ ಗಂಡು ಕಲೆಯಾಗಿದ್ದು, ಕೊಂಕಣಿ ಭಾಷೆಯಲ್ಲೂ ಯಕ್ಷಗಾನ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅರುಣ್ ಜಿ. ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರವೀಣ್ ಕಾಮತ್, ‘ಕೊಡಿಯಾಲ್ ಖಬರ್’ ಪತ್ರಿಕೆಯ ವೆಂಕಟೇಶ ಬಾಳಿಗಾ ಉಪಸ್ಥಿತರಿದ್ದರು.
‘ಕೊಂಕಣಿ ಯಕ್ಷ ಸಂವಾದ’ ದಲ್ಲಿ ಎಂ.ಆರ್. ಕಾಮತ್, ಗೋವಿಂದ ಪ್ರಭು, ಪ್ರುಲ್ಲಾ ಹೆಗ್ಡೆ, ನಿವೇದಿತಾ ಪ್ರಭು ವಿಚಾರ ಮಂಡಿಸಿದರು. ಶಾಂತಾರಾಮ ಕುಡ್ವಾ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.





