ದಾವಣಗೆರೆ: ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ನವಶಕ್ತಿ ಸಮಾವೇಶ

ದಾವಣಗೆರೆ,ಮಾ.11: ಅತಿ ಹಿಂದುಳಿದಿರುವ ದಕ್ಷಿಣ ಕ್ಷೇತ್ರ ಅಭಿವೃದ್ದಿ ಹೊಂದಬೇಕಾದರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಜನರಲ್ಲಿ ಮನವಿ ಮಾಡಿದರು.
ನಗರದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಗಾಂಧಿನಗರ, ಆಜಾದ್ ನಗರ, ಭಾಷಾ ನಗರ ಸೇರಿದಂತೆ ಇತರೆ ಪ್ರದೇಶ ನೋಡಿದರೆ, ಇಲ್ಲಿಯ ಜನತೆ ಹೇಗೆ ವಾಸಿಸುತ್ತಿದ್ದಾರೆಂಬ ದಿಗ್ಭ್ರಮೆ ಆಗುತ್ತಿದ್ದು, ಈ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ದಕ್ಷಿಣ ಕ್ಷೇತ್ರ ಉದ್ಧಾರ ಆಗಬೇಕಾದರೆ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕೆಂದರು.
ದಕ್ಷಿಣ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲಾಗಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಯಶವಂತರಾವ್ ಜಾಧವ್ ಮೂರು ಬಾರಿ ಅಲ್ಪ ಮತಗಳ ಅಂತರದಿಂದ ಪರಾಜಿತಗೊಂಡಿದ್ದಾರೆ. ಆದ್ದರಿಂದ ಈ ಬಾರಿ ಇಲ್ಲಿ ಬಿಜೆಪಿ ಬಾವುಟ ಹಾರಿಸಿ, ವಿಧಾನಸಭೆ ಪ್ರವೇಶಿಸುವ ಮೂಲಕ ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದ ಅವರು, ಹಿಂದುಳಿದ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಹೊಸ ರೂಪ ಕೊಡಬೇಕಾಗಿದೆ. ಹೀಗಾಗಿ ಶತಾಯಗತಾಯ ಪ್ರಯತ್ನದ ಮೂಲಕ ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ವಶಪಡಿಸಿಕೊಳ್ಳಬೇಕಾಗಿದೆ. ಆದ್ದರಿಂದ ಪಕ್ಷದಿಂದ ಯಾರಿಗೆ ಟಿಕೇಟ್ ಕೊಟ್ಟರೂ ಕ್ಷೇತ್ರದಲ್ಲಿ ಕಮಲ ಅರಳಿಸಿ, ಬಿ.ಎಸ್.ಯಡಿಯೂರಪ್ಪವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕೆಂದು ಕಿವಿಮಾತು ಹೇಳಿದರು.
ದಾವಣಗೆರೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಮಿತಿಮೀರಿದ್ದರೂ ಪಾಲಿಕೆಯಿಂದ 15 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿತ್ತು. ಅಂಥಹ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮನವಿಯಂತೆ ತಮ್ಮ (ಸಂಸದರ) ಅನುದಾನದಲ್ಲಿ 26 ಕಡೆಗಳಲ್ಲಿ ಕೊಳವೆಬಾವಿ ಕೊರೆಸಿ, ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಪ್ರಯತ್ನಿಸಿದ್ದೆ, ಆದರೂ ಇನ್ನೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಇತ್ತೀಚೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ನಗರಕ್ಕೆ ಆಗಮಿಸಿದ್ದ ಸಂದರ್ಭ ಮಹಿಳೆಯರು ನೀರಿನ ಸಮಸ್ಯೆಯ ಬಗ್ಗೆ ಅವರ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ನನ್ನನ್ನು ಕರೆದು ಜಾವಡೇಕರ್ ಚರ್ಚಿಸಿದ್ದು, ಕೇಂದ್ರದಿಂದ ಕುಡಿಯುವ ನೀರು ಪೂರೈಸಲು ಅನುದಾನ ಕೊಡಿಸುವಂತೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 1994ರಿಂದ ಇಲ್ಲಿಯ ವರೆಗೂ ಸುಮಾರು ಐದಾರು ಬಾರಿ ಕಾಂಗ್ರೆಸ್ ಪಕ್ಷ ಗೆಲುತ್ತಾ ಬಂದಿದೆ. ಕಾಂಗ್ರೆಸ್‍ಗೆ ದಕ್ಷಿಣ ಕ್ಷೇತ್ರ ಶಾಸಕ, ಮಂತ್ರಿ, ಸಂಸದರ ಸ್ಥಾನ ಎಲ್ಲವೂ ನೀಡಿದೆ. ಆದರೆ, ನೀವು ಆ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದೀರಿ? ದಿಲ್ಲಿ ಕಾಂಗ್ರೆಸ್‍ಗೂ, ದಾವಣಗೆರೆ ಕಾಂಗ್ರೆಸ್‍ಗೂ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ದಿಲ್ಲಿಯಲ್ಲಿ ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರ ಹೆಸರು ಇಟ್ಟರೆ, ಇಲ್ಲಿ ಎಲ್ಲ ಪ್ರದೇಶಗಳಿಗೂ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಅವರ ಹೆಸರು ಇಡಲಾಗುತ್ತಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಎನ್. ರಾಜಶೇಖರ್, ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ ಪ್ರತಿ ಬೂತ್‍ನಲ್ಲೂ ಎಲ್ಲ ವರ್ಗಗಳಿಗೂ ಸೇರಿದ 9 ಕಾರ್ಯಕರ್ತರನ್ನು ನವಶಕ್ತಿ ಕೇಂದ್ರಕ್ಕೆ ಜೋಡಿಸಲಾಗುತ್ತಿದೆ. ಈ ಕಾರ್ಯಕರ್ತರು ವಾರದಲ್ಲಿ 2 ದಿನ ಬೇರೆ ಬೂತ್‍ಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಮಂಡಲಸಭೆ ನಡೆಸಬೇಕು ಎಂದರು.
ಪಕ್ಷದ ಉಸ್ತುವಾರಿ ಶ್ರೀಪಾದ್ ಹೆಗಡೆ, ಮುಖಂಡರುಗಳಾದ ಎಲ್.ಬಸವರಾಜ್, ವೈ.ಮಲ್ಲೇಶ್, ರುದ್ರೇಗೌಡ, ಬಿ.ಎಂ.ಸತೀಶ್, ಧನಂಜಯ ಕಡ್ಲೇಬಾಳ್, ನಾಗರತ್ನ ನಾಯಕ್, ದೇವಿರಮ್ಮ ರಾಮಚಂದ್ರಪ್ಪ, ಎಲ್.ಡಿ.ಗೋಣೆಪ್ಪ, ಶಿವನಗೌಡ ಪಾಟೀಲ್, ತರಕಾರಿ ಶಿವು, ನರಸಿಂಹಮೂರ್ತಿ, ಪರಶುರಾಂ, ಶಂತಕುಮಾರ್, ಹನುಮಂತಪ್ಪ, ವೀರೇಂದ್ರ ಪಾಟೀಲ್ ಇದ್ದರು.







