ಮಡಿಕೇರಿ: ಚೈನ್‍ಗೇಟ್ ಬಳಿ ದಟ್ಟಹೊಗೆ; ಹೆದ್ದಾರಿಯಲ್ಲಿ ಪರದಾಡಿದ ವಾಹನ ಚಾಲಕರು
ಮಡಿಕೇರಿ, ಮಾ.11: ನಗರದ ಚೈನ್‍ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 275ರ ವ್ಯಾಪ್ತಿಯಲ್ಲಿ ಕಾಡಿಗೆ ಬೆಂಕಿ ಬಿದ್ದ ಪರಿಣಾಮ ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಯಿತು. ಪೊಲೀಸ್ ವಸತಿ ಗೃಹ ಹಾಗೂ ಅರಣ್ಯ ಇಲಾಖೆ ಕಚೇರಿ ಇರುವ ಪ್ರದೇಶ ಇದಾಗಿದ್ದು, ಕಿಡಿಗೇಡಿಗಳ ಕೃತ್ಯದಿಂದಾಗಿ ಗಿಡ, ಮರಗಳು ಅಗ್ನಿಗೆ ಆಹುತಿಯಾದವು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ದಟ್ಟ ಹೊಗೆ ಹಬ್ಬಿದ ಕಾರಣ ವಾಹನಗಳು ಸಂಚರಿಸಲಾಗದೆ ಸಾಲುಗಟ್ಟಿ ನಿಲ್ಲಬೇಕಾಯಿತು. ಅಗ್ನಿಯ ಜ್ವಾಲೆ ಹೆಚ್ಚಿನ ಪ್ರದೇಶಕ್ಕೆ ಹಬ್ಬುವ ಆತಂಕ ಎದುರಾಯಿತ್ತಾದರೂ ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.
ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ, ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಇಲಾಖೆ ಪರಿಸ್ಥಿತಿಯನ್ನು ಎದುರಿಸಲು ಹೆಣಗಾಡುತ್ತಿದೆ. ನಿರಂತರ ಬೆಂಕಿಗೆ ಅರಣ್ಯ ಪ್ರದೇಶ ಆಹುತಿಯಾಗುತ್ತಿರುವುದರಿಂದ ಮುಂಬರುವ ಎರಡು ತಿಂಗಳ ಕಾಲ ಕುಡಿಯುವ ನೀರಿನ ಕೊರತೆ ಎದುರಾಗಬಹುದೆನ್ನುವ ಆತಂಕದಲ್ಲಿ ಜಿಲ್ಲೆಯ ಜನರಿದ್ದಾರೆ. ಪರಿಸರ ರಕ್ಷಣೆಯ ಕುರಿತು ಜನಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕೆನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.