ಬಗಂಬಿಲ ಪ್ರಾಥಮಿಕ ಶಾಲೆಯಲ್ಲಿ ಅಜ್ಜ-ಅಜ್ಜಿಯಂದಿರ ಸಮ್ಮಿಲನ
ಉಳ್ಳಾಲ, ಮಾ. 11: ಮನೆಯಲ್ಲೇ ಇರುವ ಅಜ್ಜ-ಅಜ್ಜಿಯಂದಿರ ಮಾರ್ಗದರ್ಶನ ಪಡೆದು ಮುನ್ನಡೆದಾಗ ಯಶಸ್ಸು ತನ್ನಿಂತಾನೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಬಗಂಬಿಲ ಅಂಗನವಾಡಿ ಕಾರ್ಯಕರ್ತೆ ಪುಷ್ಪಕುಮಾರಿ ಅಭಿಪ್ರಾಯಪಟ್ಟರು.
ಬಗಂಬಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಸಿಆರ್‌ಟಿ ಯೋಜನೆಯಡಿ ನಡೆದ ಅಜ್ಜ-ಅಜ್ಜಿಯಂದಿರೊಂದಿಗೆ ಮೊಮ್ಮಕ್ಕಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯರು ಆಡುವ ಪ್ರತಿಯೊಂದು ಮಾತು ಅನುಭವದಿಂದ ಕೂಡಿರುತ್ತದೆ. ಈ ನಿಟ್ಟಿನಲ್ಲಿ ಅವರ ಮಾತುಗಳನ್ನು ತಾತ್ಸಾರ ಭಾವನೆಯೊಂದಿಗೆ ಕಾಣದೆ ಪಾಲಿಸುತ್ತಾ ಬಂದಾಗ ಸಮಾಜದಲ್ಲಿ ಉನ್ನತ ಸ್ಥಾನ, ಗೌರವ ಪಡೆಯಬಹುದು ಎಂದು ಹೇಳಿದರು.
ಶಿಕ್ಷಕಿ ಪ್ರತಿಮಾ ಮಾತನಾಡಿ, ರೆಂಬೆ, ಕೊಂಬೆಗಳಿಂದ ಕೂಡಿದ ಮರ ಸದೃಢವಾಗಿರುತ್ತದೆ, ಅದಕ್ಕಿಂತಲೂ ಮೊದಲು ಬೇರು ಗಟ್ಟಿಯಾಗಿರ ಬೇಕು. ಅದೇ ರೀತಿ ಮನೆಯಲ್ಲಿ ಅಜ್ಜ-ಅಜ್ಜಿಯಂದಿರಿದ್ದಾಗ ಆ ಮನೆ ಬಲಿಷ್ಟವಾಗಿರುತ್ತದೆ. ಮಕ್ಕಳ ಜೊತೆ ಹೆತ್ತವರು ಕಠಿಣವಾಗಿ ನಡೆದು ಕೊಂಡರೂ ಮೊಮ್ಮಕ್ಕಳ ಜೊತೆ ತಾಳ್ಮೆ, ಪ್ರೀತಿಯಿಂದ ವರ್ತಿಸುತ್ತಾರೆ ಎಂದು ತಿಳಿಸಿದರು.
ಹಿರಿಯರಾದ ಗಂಗಯ್ಯ ಗಟ್ಟಿ ಹಾಗೂ ಸುಂದರಿ ಪೂಜಾರಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಯೋಗೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಹಮ್ಮದ್ ಶರೀಫ್, ಯಶೋಧ, ರೋಶನಿ ನಿಲಯದ ಸಮಾಜ ಸೇವಾ ವಿಭಾಗ ವಿದ್ಯಾರ್ಥಿ ಗಳಾದ ಜೋಶ್ನಿಯಾ, ರಾಜ್, ಸಹಶಿಕ್ಷಕಿಯರಾದ ಉಮಾವತಿ, ಸವಿತಾ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶಕುಂತಲಾ ಶೆಟ್ಟಿ ಸ್ವಾಗತಿಸಿದರು. ಸಹ ಶಿಕ್ಷಕಿ ಯಮುನಾ ವಂದಿಸಿದರು. ಸ್ಕೌಟ್ ಶಿಕ್ಷಕಿ ಗೀತಾ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು.









