ಭಾರತದ ವನಿತೆಯರಿಗೆ 3-1 ಸರಣಿಯ ಜಯ
ಕೊನೆಯ ಪಂದ್ಯದಲ್ಲಿ ಡ್ರಾ

ಸಿಯೋಲ್, ಮಾ.11: ಭಾರತ ಮತ್ತು ದಕ್ಷಿಣ ಕೊರಿಯಾ ಮಹಿಳಾ ಹಾಕಿ ತಂಡಗಳ ನಡುವಿನ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿದ್ದು, ಇದರೊಂದಿಗೆ ಭಾರತದ ವನಿತೆಯರ ಹಾಕಿ ತಂಡ 3-1 ಅಂತರದಲ್ಲಿ ಸರಣಿ ಜಯಿಸಿದೆ.
ಜಿನ್‌ಚುನ್ ಅಥ್ಲೆಟಿಕ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಅಂತಿಮ ಕ್ವಾರ್ಟರ್‌ನಲ್ಲಿ ತಲಾ 1 ಗೋಲು ದಾಖಲಿಸಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿತು.
ಪಂದ್ಯ ಗೋಲುರಹಿತವಾಗಿ ಕೊನೆಗೊಳ್ಳುವ ಹಾದಿಯಲ್ಲಿದ್ದಾಗ ಭಾರತದ ವಂದನಾ ಕಟಾರಿಯಾ 48ನೇ ನಿಮಿಷದಲ್ಲಿ ತಂಡದ ಗೋಲು ಖಾತೆ ತೆರೆದರು. ಭಾರತ 1-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಆದರೆ ಮುನ್ನಡೆ ಹೆಚ್ಚು ಹೊತ್ತು ಇರಲಿಲ್ಲ. ಮತೆ ಎರಡು ನಿಮಿಷದಲ್ಲಿ ದಕ್ಷಿಣ ಕೊರಿಯಾದ ಬೊಮಿ ಕಿಮ್(50ನೇ ನಿಮಿಷ) ಗೋಲು ಕಬಳಿಸಿ ಭಾರತದ ವನಿತೆಯರ ಗೆಲುವಿನ ಆಸೆಯನ್ನು ಮಣ್ಣುಗೂಡಿಸಿದರು.
ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿತು.
ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಎಚ್ಚರಿಕೆಯಿಂದ ಆಡಿದವು. ಮೊದಲ 15 ನಿಮಿಷಗಳಲ್ಲಿ ಗೋಲು ದಾಖಲಾಗಲಿಲ್ಲ. ಸ್ಕೋರ್‌ಲೈನ್ 0-0 ಆಗಿತ್ತು.
ದ್ವಿತೀಯ ಕ್ವಾರ್ಟರ್‌ನಲ್ಲಿ ಕೊರಿಯಾ ತಂಡದ ಆಟಗಾರ್ತಿಯರಿಂದ ಆಕ್ರಮಣಕಾರಿ ಆಟ ಕಂಡು ಬಂತು. ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿದರೂ, ಗೋಲು ಬರಲಿಲ್ಲ. ಭಾರತದ ಗೋಲು ಕೀಪರ್ ರಜನಿ ಇತಿಮಾರ್ಪು ಗೋಲು ನಿರಾಕರಿಸಿದರು. ಇದರಿಂದಾಗಿ ಆತಿಥೇಯರ ಗೋಲು ಗಳಿಸುವ ಪ್ರಯತ್ನ ಫಲ ನೀಡಲಿಲ್ಲ.
ಗೋಲುರಹಿತವಾಗಿ ಪ್ರಥಮಾರ್ಧ ಕೊನೆಗೊಂಡಿತು. 41ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಕೊರಿಯಾದ ಗೋಲು ಕೀಪರ್ ಮಿಜಿನ್ ಹ್ಯಾನ್ ಗೋಲು ಬಿಟ್ಟುಕೊಡಲಿಲ್ಲ.
ದ್ವಿತಿಯಾರ್ಧದ ಕೊನೆಯಲ್ಲಿ ಭಾರತಕ್ಕೆ ಗೋಲು ದಾಖಲಿಸಲು ಒಳ್ಳೆಯ ವಾತಾವರಣ ಕಂಡು ಬಂದಿತ್ತು. 48ನೇ ನಿಮಿಷದಲ್ಲಿ ನಾಯಕಿ ರಾಣಿ ಅವರು ಚೆಂಡನ್ನು ವಂದನಾ ಅವರತ್ತ ಪಾಸ್ ಮಾಡಿದರು. ಆಗ ವಂದನಾ ಕಟರಿಯಾ ಮಿಂಚಿನ ವೇಗದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ರವಾನಿಸಿದರು. 50ನೇ ನಿಮಿಷದಲ್ಲಿ ಕೊರಿಯಾದ ಬೊಮಿ ಕಿಮ್ ಗೋಲು ಬಾರಿಸಿ ತಿರುಗೇಟು ನೀಡಿದರು. ಅಂತಿಮ 10 ನಿಮಿಷದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಿದವು. ಆದರೆ ಭಾರತ ಮತ್ತು ಕೊರಿಯಾ ತಂಡದ ಆಟಗಾರ್ತಿಯರಿಗೆ ಗೆಲುವಿನ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.







