ಅಸಂಪ್ರದಾಯಿಕ ಮೀನುಗಾರಿಕೆ ನಿಷೇಧ, ನಾಡದೋಣಿಗಳ ಸೀಮೆಎಣ್ಣೆ ಬಿಡುಗಡೆಗೊಳಿಸಲು ಆಗ್ರಹಿಸಿ ಧರಣಿ

ಉಡುಪಿ, ಮಾ.12: ಕೇಂದ್ರ ಹಾಗೂ ರಾಜ್ಯ ಸರಕಾರ ನಿಷೇಧಿಸಿದ ಅಸಂಪ್ರದಾಯಿಕ ಮೀನುಗಾರಿಕೆಯನ್ನು ಉಡುಪಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ಜಾರಿಗೆ ತರುವಂತೆ ಮತ್ತು ನಾಡದೋಣಿಗಳ ಎಪ್ರಿಲ್ ಮತ್ತು ಮೇ ತಿಂಗಳ ಸೀಮೆಎಣ್ಣೆ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಮೀನುಗಾರರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ನಾಡದೋಣಿ ಮೀನುಗಾರರ ಸಂಘದ ಮುಖಂಡ ನವೀನ್ ಚಂದ್ರ ಉಪ್ಪುಂದ, ಅಸಂಪ್ರದಾಯಿಕ ಮೀನು ಗಾರಿಕೆಗಳಾದ ಬುಲ್‌ಟ್ರಾಲ್ ಮೀನುಗಾರಿಕೆ, ಬೆಳಕು ಮೀನುಗಾರಿಕೆ, ಚೌರಿ, ಫ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಕಪ್ಪೆ ಬೊಂಡಾಸ್ ಹಿಡಿಯುವುದು ಹಾಗೂ ಪಚ್ಚಿಲೆ ತೆಗೆಯುವುದನ್ನು ಈಗಾಗಲೇ ಸರಕಾರಗಳು ನಿಷೇಧಿಸಿ ಆದೇಶ ನೀಡಿದೆ. ಆದರೆ ಈ ಆದೇಶ ಜಿಲ್ಲೆಯಲ್ಲಿ ಜಾರಿಗೆ ಬಂದಿಲ್ಲ. ಆದುದರಿಂದ ಇದನ್ನು ಕಡ್ಡಾಯ ವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಾಂಪ್ರಾದಾಯಿಕ ನಾಡದೋಣಿಗಳ ಔಟ್ ಬೋರ್ಡ್ ಇಂಜಿನ್‌ಗಳಿಗೆ ಸರಕಾರದಿಂದ ರಹದಾರಿಗಳ ಮೂಲಕ ಸಬ್ಸಿಡಿ ಸೀಮೆಎಣ್ಣೆಯನ್ನು ನೀಡಲಾಗು ತ್ತಿದೆ. ಆದರೆ ರಾಜ್ಯದ ಮುಂಗಡ ಪತ್ರದಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ನೀಡುವ ಸೀಮೆಎಣ್ಣೆಯ ಬಗ್ಗೆ ಪ್ರಸ್ತಾಪ ಇಲ್ಲ ಮತ್ತು ರಾಜ್ಯದಲ್ಲಿ ಚುನಾವಣೆ ನಡೆಯು ವುದರಿಂದ ನಾಡದೋಣಿಗಳಿಗೆ ನೀಡುತ್ತಿರುವ ಸೀಮೆಎಣ್ಣೆಯನ್ನು ಈ ತಿಂಗಳಲ್ಲಿ ನಿರಂತರವಾಗಿ ಈ ಹಿಂದೆ ನೀಡುತ್ತಿದ್ದಂತೆ ಆಹಾರ ಇಲಾಖೆಯ ಮೂಲಕ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಾಂಪ್ರಾದಾಯಿಕ ನಾಡದೋಣಿಗಳ ಔಟ್ ಬೋರ್ಡ್ ಇಂಜಿನ್‌ಗಳಿಗೆ ಸರಕಾರದಿಂದ ನೀಡುತ್ತಿದ್ದ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡ ಬೇಕು. ನಾಡದೋಣಿ ಮೀನುಗಾರಿಕೆಗೆ ತೊಂದರೆ ಉಂಟು ಮಾಡುತ್ತಿರುವ ಯಾಂತ್ರೀಕ ಬೋಟುಗಳು ತೀರ ಪ್ರದೇಶದಿಂದ ಕನಿಷ್ಠ 12 ಮಾರು ದೂರದಲ್ಲಿ ಕಡ್ಡಾಯವಾಗಿ ಮೀನುಗಾರಿಕೆ ಮಾಡುವಂತೆ ಆದೇಶ ಮಾಡಬೇಕು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಧರಣಿ ನಿರತರಿಂದ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಸಲಹೆಗಾರ ಮದನ ಕುಮಾರ್ ಉಪ್ಪುಂದ, ನಾಡದೋಣಿ ಮೀನುಗಾರ ಸಂಘದ ಬೈಂದೂರು ವಲಯ ಅಧ್ಯಕ್ಷ ಸೋಮಶೇಖರ್ ಉಪ್ಪುಂದ, ಗಂಗೊಳ್ಳಿ ವಲಯ ಅಧ್ಯಕ್ಷ ಮಂಜು ಬಿಲ್ಲವ, ಬೇಸಿಗೆ ನಾಡದೋಣಿ ಸಂಘದ ಅಧ್ಯಕ್ಷ ಚಂದ್ರಕಾಂತ ಕರ್ಕೇರ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಶ್ರೀಯಾನ್, ನರೇಶ್ ಖಾರ್ವಿ ಕೊಡೇರಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಅಖಿಲ ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷೆ ಶ್ರೀಲತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
60 ಬೋಟುಗಳ ಪರವಾನಿಗೆ ರದ್ದು: ಡಿಸಿ
ಬೆಳಕಿನ ಮೀನುಗಾರಿಕೆ ನಡೆಸುವ 60 ಬೋಟುಗಳನ್ನು ಈಗಗಾಲೇ ವಶಕ್ಕೆ ತೆಗೆದುಕೊಂಡು ಪರವಾನಿಗೆ ರದ್ದು ಮಾಡಲಾಗಿದೆ. ಆ ಬೋಟುಗಳ ಡಿಸೇಲ್ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗಿದೆ. ನೋಂದಾಣಿ ರದ್ದತಿಗೆ ಮಂಗಳೂರು ಕಚೇರಿಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.
ಜನರೇಟರ್ ಆಳವಡಿಸಿರುವ ಎಲ್ಲ ಬೋಟುಗಳನ್ನು ಪೊಲೀಸ್ ಭದ್ರತೆ ಯಲ್ಲಿ ಮಲ್ಪೆ ಬಂದರಿನಿಂದಲೇ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಜನರೇಟ್ ತೆರವುಗೊಳಿಸದೆ ಬೋಟುಗಳಿಗೆ ಸಮುದ್ರಕ್ಕೆ ಇಳಿಯಲು ಅವಕಾಶ ನೀಡಬಾರದು ಎಂಬುದಾಗಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಪರವಾನಿಗೆ ಇಲ್ಲದ ಬೋಟುಗಳು ಯಾವ ರಾಜ್ಯ ದಲ್ಲೂ ಮೀನುಗಾರಿಕೆ ನಡೆಸಲು ಅವಕಾಶ ಇರುವುದಿಲ್ಲ ಎಂದರು.
ಫೆಬ್ರವರಿ ತಿಂಗಳ ಸೀಮೆಎಣ್ಣೆ ವಿತರಿಸುವ ಅವಧಿಯನ್ನು ರಾಜ್ಯ ಸರಕಾರ ಮಾ. 5ರವರೆಗೆ ವಿಸ್ತರಿಸಿದೆ. ಇದೀಗ ಮಾ.10ರವರೆಗೆ ವಿಸ್ತರಿಸಲು ಕೇಂದ್ರ ಸರಕಾರ ಆದೇಶ ಬರಬೇಕು ಎಂದು ಇಂಡಿಯಲ್ ಆಯಿಲ್ ಕಂಪೆನಿ ತಿಳಿಸಿದೆ. ಹಾಗಾಗಿ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಜನವರಿ ತಿಂಗಳ ಸೀಮೆಎಣ್ಣೆಯನ್ನು ಮಾರ್ಚ್ ತಿಂಗಳ ಜೊತೆ ನೀಡಲಾಗುತ್ತದೆ. ಇಂದಿನಿಂದ ಸೀಮೆಎಣ್ಣೆ ವಿತರಿಸುವ ಕೆಲಸ ಆರಂಭವಾಗಿದೆ ಎಂದು ಅವರು ಹೇಳಿದರು.







