ಮಹಿಳೆಯರ ಅಭಿವೃದ್ಧಿಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಶ್ರೀವಿದ್ಯಾ

ಮಡಿಕೇರಿ,ಮಾ.12: ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಮಾತ್ರ ಒಂದು ಕುಟುಂಬ ಹಾಗೂ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅಭಿಪ್ರಾಯ ಪಟ್ಟಿದ್ದಾರೆ.
“ಸುಸ್ಥಿರ ಅರ್ಥಿಕ ಅಭಿವೃದ್ಧಿಗೆ ಮಹಿಳೆಯರ ಸ್ವಾವಲಂಬನೆ” ಎಂಬ ವಿಷಯದಡಿ ಮೈಸೂರಿನ ಓ.ಡಿ.ಪಿ ಸಂಸ್ಥೆ ಮತ್ತು ಕೊಡಗು ಜಿಲ್ಲಾ ಮಹಿಳೋದಯ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ನಗರದ ಕಾವೇರಿ ಹಾಲ್‍ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.
ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಚೌಕಟ್ಟಿನಿಂದ ಹೊರಬಂದು ಸುಸ್ಥಿರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾವಲಂಭನೆಯ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಸಮಾಜದ ಎಲ್ಲಾ ಕ್ಷೇತ್ರಗಳಲ್ಲು ಗುರುತಿಸಿಕೊಂಡಿದ್ದಾರೆ. ಮಹಿಳೆಯರು ಕೇವಲ ಆರ್ಥಿವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಒಕ್ಕೂಟಗಳೊಂದಿಗೆ ಸೇರಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕೆಂದು ಶ್ರೀವಿದ್ಯಾ ಕರೆ ನೀಡಿದರು.
ಮಹಿಳಾ ಸಂಘ ಸಂಸ್ಥೆಗಳು ಮಹಿಳೆಯರಿಗೆ ಸ್ವಾವಲಂಭಿಗಳಾಗಿ ಬದುಕುವ ಅವಕಾಶವನ್ನು ಕಲ್ಪಿಸಿದ್ದು, ಇದೇ ಕಾರಣದಿಂದ ಮಹಿಳೆಯರು ಇಂದು ಪುರುಷರಿಗೆ ಸಮಾನವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮೈಸೂರಿನ ಓ.ಡಿ.ಪಿ. ಸಂಸ್ಥೆಯ ಸಹ ನಿರ್ದೇಕರಾದ ಅಲೆಕ್ಸ್ ಪ್ರಶಾಂತ್ ಸಿಕ್ವೇರ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಹೆಣ್ಣಿಲ್ಲದೆ ಸಮಾಜವಿಲ್ಲ, ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಎಂದರು. ನಿರಂತರ ಸಾಧನೆಯ ಮೂಲಕ ಸಮಾಜದಲ್ಲಿ ಖ್ಯಾತಿಯನ್ನು ಗಳಿಸಬೇಕೆಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಭಿವೃದ್ಧಿ ಅಧಿಕಾರಿ ಮುಂಡಂಡ ನಾಣಯ್ಯ ಮಾತನಾಡಿ, ಮೈಸೂರಿನ ಓ.ಡಿ.ಪಿ. ಸಂಸ್ಥೆ ಬಡ ಕುಟುಂಬದ ಮಹಿಳೆಯರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 2,500 ಸ್ವಸಹಾಯ ಸಂಘಗಳನ್ನು ರಚನೆ ಮಾಡುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯವೆಂದರು.
ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ತಮ್ಮ ಕುಟುಂಬದ ಏಳಿಗೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿಲ್ಲ. ಬದಲಿಗೆ ಸಮಾಜಮುಖಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಸಮಾಜ ಹಾಗೂ ಕುಟುಂಬದ ನಿರ್ವಹಣೆ ಮಾಡುವ ಮಹತ್ತರ ಜವಬ್ದಾರಿಯನ್ನು ಮಹಿಳೆ ಹೊಂದಿದ್ದಾಳೆ ಎಂದು ನಾಣಯ್ಯ ಹೇಳಿದರು.
ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಹೆಣ್ಣು ಶಿಶುಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವ ಬೇಡವೆಂದು ಅವರು ಕಿವಿಮಾತು ಹೇಳಿದರು. ಹೆಣ್ಣುಭ್ರೂಣ ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಅಗತ್ಯವಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ ಮಾತನಾಡಿ, ಮಹಿಳೆಯರಿಗೆ ಶುಭ ಕೋರಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕರಾದ ಸುನೀತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಮ್ತಾಜ್, ಮೈಸೂರು ಓ.ಡಿ.ಪಿ. ಸಂಯೋಜಕರಾದ ಮೋಲಿ ಫುಡ್ತಾದೊ, ಸುನೀತ, ಯೋಜನಾಧಿಕಾರಿ ಸುಮತಿ, ಮಹಿಳೋದಯ ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾದ ಪುಷ್ಪ, ಜಾಯ್ಸ್ ಮ್ಯಾನೆಜಸ್, ಗ್ರಾ.ಪಂ. ವಿಕಾಸನ ಪುರುಷ ಸಂಘದ ಅಧ್ಯಕ್ಷರಾದ ಹನೀಫ್ ಮತ್ತಿತರರು ಉಪಸ್ಥಿತರಿದ್ದರು.







