ಮಾ.15 ರಂದು ರಾಷ್ಟ್ರಾದ್ಯಂತ ಕಾರ್ಮಿಕರ ಧರಣಿ
ಬೆಂಗಳೂರು, ಮಾ. 12: ಕೇಂದ್ರ ಸರಕಾರದ ಕಾರ್ಮಿಕ, ರೈತ ಮತ್ತು ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಮಾ.15 ರಂದು ದೇಶ ವ್ಯಾಪಿ ಧರಣಿ ಸತ್ಯಾಗ್ರಹ ನಡೆಸಲು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ, ರಕ್ಷಣಾ ವಲಯದ ಕಾರ್ಮಿಕ ಸಂಘಟನೆಗಳ ನೌಕರರು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಲವು ಭಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಅದರ ಮುಂದುವರೆದ ಭಾಗವಾಗಿ ರಕ್ಷಣಾ ಉತ್ಪಾದನಾ ವಲಯದ ಕಾರ್ಖಾನೆಗಳ ಕಾರ್ಮಿಕರು ಮಾ.15 ರಂದು ದೇಶವ್ಯಾಪಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಸಾರ್ವಜನಿಕ ವಲಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದು, ದೇಶದ ಅರ್ಥ ವ್ಯವಸ್ಥೆಯನ್ನು ಕುಸಿತದಿಂದ ಪಾರು ಮಾಡಿದ ಸಾರ್ವಜನಿಕ ವಲಯದ ಬ್ಯಾಂಕುಗಳ ಟೊಂಕ ಮುರಿದು ಕಾರ್ಪೋರೇಟ್ ವಲಯಕ್ಕೆ ಬಲಿ ಕೊಡಲು ಮೋದಿ ಸರಕಾರ ಸಜ್ಜಾಗಿದೆ. ಕಾರ್ಪೋರೇಟ್ ಸಂಸ್ಥೆಗಳಿಗೆ ನೀಡಿದ ತೆರಿಗೆ ವಿನಾಯಿತಿ ಹಾಗೂ ರಿಯಾಯಿತಿಗಳಿಂದ ಉಂಟಾದ ವಿತ್ತೀಯ ಕೊರತೆಯನ್ನು ಸರಿಪಡಿಸಿಕೊಳ್ಳಲು 74 ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಹಾಗೂ ಬ್ಯಾಂಕ್‌ಗಳ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಾದ್ಯಂತ ಬ್ಯಾಂಕ್‌ಗಳಿಂದ ಕೋಟ್ಯಂತರ ರೂ.ಗಳು ಬಂಡವಾಳಶಾಹಿಗಳಿಗೆ ಸಾಲ ನೀಡಿ, ಅದನ್ನು ವಂಚಿಸಿ ದೇಶದಿಂದ ಪರಾರಿಯಾಗಲು ಕೇಂದ್ರ ಸರಕಾರ ಪರೋಕ್ಷವಾಗಿ ಸಹಕಾರ ನೀಡುತ್ತಿದೆ. ರೈತರ ಸಾಲ ಮನ್ನಾ ಮಾಡಲು, ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತದೆ. ಆದರೆ, ಕೋಟ್ಯಾಧಿಪತಿಗಳಿಗೆ ಸಾವಿರಾರು ಕೋಟಿ ಸಾಲ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಬೇಡಿಕೆಗಳು: ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಹೊಸ ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದೇಶದ ಎಲ್ಲಾ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಬೇಕು.
ಎಲ್ಲಾ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ವೇತನ ನಿಗದಿ ಪಡಿಸಬೇಕು. ನಿವೃತ್ತ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ. ಗಳಿಗೆ ಕಡಿಮೆ ಇಲ್ಲದಂತೆ ಪಿಂಚಣಿ ನೀಡಬೇಕು. ಖಾಯಂ ಕೆಲಸಗಳಲ್ಲಿ ಗುತ್ತಿಗೆ ಪದ್ಧತಿ ಕೈಬಿಡಬೇಕು. ಗುತ್ತಿಗೆ ಕಾರ್ಮಿಕರಿಗೂ ಖಾಯಂ ನೌಕರರಂತೆ ಸಮಾನ ವೇತನ ನೀಡಬೇಕು. ವೇತನ, ಬೋನಸ್, ಪಿಎಫ್ ಪಡೆಯಲು ಇರುವ ನಿರ್ಬಂಧಗಳನ್ನು ತೆಗೆದುಹಾಕಬೇಕು. ಅರ್ಜಿ ಸಲ್ಲಿಸಿದ 45 ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ನೋಂದಣಿ ಮಾಡಬೇಕು. ರಕ್ಷಣಾ ವಲಯದ ಖಾಸಗೀಕರಣ ಮಾಡಬಾರದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.







