"ರೆಹಮಾನ್ ಖಾನ್‌ಗೆ ಟಿಕೆಟ್ ನೀಡದಿರುವುದು ಸ್ವಾಗತಾರ್ಹ"

ಬೆಂಗಳೂರು, ಮಾ.12: ರಾಜ್ಯಸಭೆ ಚುನಾವಣೆಗೆ ನಡೆಯುತ್ತಿರುವ ನಾಮನಿರ್ದೇಶನಕ್ಕೆ ಮುಸ್ಲಿಂ ಸಮುದಾಯದ ಮುಖಂಡ ರೆಹಮಾನ್ ಖಾನ್‌ರನ್ನು ಆಯ್ಕೆ ಮಾಡದಿರುವುದನ್ನು ಹಝ್ರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸ್ವಾಗತಿಸಿದೆ.
ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ಗಳಿಸಿಕೊಂಡ ಇತಿಹಾಸ ರೆಹಮಾನ್ ಖಾನ್‌ಗೆ ಇಲ್ಲ. ಬದಲಿಗೆ, ಅಮಾನತ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು ಸಹಚರರೊಂದಿಗೆ ಸೇರಿ ಲೂಟಿ ಮಾಡಿದ್ದರು. ಅಲ್ಲದೆ, 15 ವರ್ಷಗಳ ಹಿಂದೆಯೇ ಬ್ಯಾಂಕಿನಲ್ಲಿ ಬೇನಾಮಿ ಖಾತೆಗಳನ್ನು ಹೊಂದಿದ್ದು, ನೂರಾರು ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆದು ಹಗಲು ದರೋಡೆ ಮಾಡಿದ್ದಾರೆ ಎಂದು ರಂಗದ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಐಫಿಕ್, ಅಮಾನತ್ ಮೋಟಾರ್ಸ್, ಅಲ್ ಅಮೀನ್ ಹೌಸಿಂಗ್ ಡೆವಲಪ್‌ಮೆಂಟ್, ಮೆಡಿಕಲ್ ಟ್ರಾನ್ಸ್‌ಸ್ಕ್ರಿಪ್‌ಷನ್, ಇನ್‌ಫೋಕಾಂ ಸಾಪ್ಟ್‌ವೇರ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಹುಟ್ಟುಹಾಕಿ ಮುಸ್ಲಿಂ ಸಮುದಾಯವನ್ನು ಲೂಟಿ ಮಾಡಿದ್ದಾರೆ. ಕೇಂದ್ರ ಸರಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಇಂತಹ ವ್ಯಕ್ತಿಯನ್ನು ರಾಜ್ಯದಿಂದ ಮತ್ತೊಂದು ಬಾರಿ ಆಯ್ಕೆ ಮಾಡುವುದು ಸರಿಯಲ್ಲ ಎನ್ನುವುದು ನಮ್ಮ ವಾದವಾಗಿತ್ತು. ರಾಜ್ಯ ಸರಕಾರ ನಮ್ಮ ವಾದವನ್ನು ಮನ್ನಿಸಿದ್ದು ಸ್ವಾಗತಾರ್ಹ ಕ್ರಮ. ರಾಜ್ಯದಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಡಾ.ಸಯ್ಯದ್ ನಾಸೀರ್ ಹುಸೇನ್, ಎಲ್. ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಗೆ ಗೆಲುವು ಸಿಗುತ್ತದೆ. ಪ್ರಾಮಾಣಿಕ ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗುವಂತಾಗಲಿ ಎಂದು ಹೇಳಿದರು.







