2020ರ ಒಲಿಂಪಿಕ್ಸ್‌ಗೆ ಕಬಡ್ಡಿ ಆಯ್ಕೆ: ಡಾ.ಜಿ.ಆರ್.ಶ್ರೀಧರ್‌ಕುಮಾರ್
ಬೆಂಗಳೂರು, ಮಾ.12: ಜಗತ್ತಿನ ಸುಮಾರು 236 ದೇಶಗಳು ಕಬಡ್ಡಿ ಪಂದ್ಯಾವಳಿಗಳನ್ನು ವೀಕ್ಷಣೆ ಮಾಡುತ್ತಿದ್ದು, 2020ರ ಒಲಿಂಪಿಕ್ಸ್‌ಗೆ ಕಬಡ್ಡಿ ಆಯ್ಕೆಯಾಗಿದೆ ಎಂದು ಭಾರತೀಯ ಕ್ರೀಡಾಪ್ರಾಧಿಕಾರದ ಸದಸ್ಯ ಡಾ.ಜಿ.ಆರ್.ಶ್ರೀಧರ್‌ಕುಮಾರ್ ಅಭಿಪ್ರಾಯಿಸಿದರು.
ಸೋಮವಾರ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ದೇಸಿ ಹಬ್ಬ ಹಾಗೂ ರಾಜ್ಯಮಟ್ಟದ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಆಟವಾದ ಕಬಡ್ಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ಸಂತಸ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರೊ ಕಬಡ್ಡಿ ಜನಪ್ರಿಯಗೊಳ್ಳುತ್ತಿದ್ದು, ಆಟಗಾರರಿಗೆ ಉತ್ತಮ ಬೇಡಿಕೆ ಬಂದಿದೆ. ಪ್ರೊ ಕಬಡ್ಡಿ ಪಂದ್ಯಾವಳಿಗಳಲ್ಲಿ ಒಬ್ಬೊಬ್ಬ ಆಟಗಾರರ 10ರಿಂದ 15ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳಲ್ಲಿ ಒಂದು ಕೋಟಿ ರೂ.ಗೂ ಹೆಚ್ಚು ಸಂಭಾವನೆಯಿದೆ. ಹೀಗಾಗಿ ಯುವ ಜನತೆ ಕಬಡ್ಡಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಯಾವುದೆ ಕ್ರೀಡಾಪಟು ತಾನಾಡುವ ಕ್ರೀಡೆಯಲ್ಲಿ ಯಶಸ್ಸು ಗಳಿಸಬೇಕಾದರೆ ಶಿಸ್ತು ಬಹಳ ಮುಖ್ಯ. ಆರಂಭದಲ್ಲಿ ಪ್ರತಿಭೆಯಿಂದ ಜನಪ್ರಿಯನಾಗಬಹುದು. ಆದರೆ, ಶಿಸ್ತಿಲ್ಲದಿದ್ದರೆ ಆತನ ಪ್ರತಿಭೆ ಹಾಗೂ ಜನಪ್ರಿಯತೆ ನಶಿಸುತ್ತಾ ಸಾಗುತ್ತದೆ. ಹೀಗಾಗಿ ಕ್ರೀಡಾಪಟುಗಳು ಶಿಸ್ತುಬದ್ಧ ಸತತ ಅಭ್ಯಾಸದಿಂದ ಉತ್ತಮ ಕ್ರೀಡಾಪಟುವಾಗಿ ದೇಶಕ್ಕೆ ಕೀರ್ತಿ ತರಬೇಕೆಂದು ಅವರು ಆಶಿಸಿದರು.
ಸಾಹಿತ್ಯ ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಜಾಗತೀಕರಣದ ಒತ್ತಡದಿಂದ ಗ್ರಾಮೀಣ ಬದುಕು ನಶಿಸುತ್ತಾ ಸಾಗಿದೆ. ಹಳ್ಳಿಯ ಜನತೆ ಕೃಷಿಯೊಂದಿಗೆ, ಹಸು, ಎತ್ತು ಹಾಗೂ ಕೃಷಿ ಸಲಕರಣೆಗಳೊಂದಿಗಿನ ಸಂಬಂಧಗಳು ಕಡಿಮೆಯಾಗುತ್ತಾ ಬರುತ್ತಿದೆ. ಇದರಿಂದ ಗ್ರಾಮೀಣ ಹಾಗೂ ನಗರಕ್ಕೆ ಸೇತುವೆಯಾಗಬೇಕಾದ ಹಬ್ಬ ಹರಿದಿನಗಳು ನೈಜತೆಯನ್ನು ಕಳೆದುಕೊಂಡಿವೆ ಎಂದು ವಿಷಾದಿಸಿದರು.
ಶಿಕ್ಷಕರು ದೇಶಿ ಸಂಸ್ಕೃತಿಯ ವಾಹಕರಾಗಿ ಕೆಲಸ ಮಾಡಬೇಕಾದ ಜವಾಬ್ದಾರಿಯಿದೆ. ಆ ನಿಟ್ಟಿನಲ್ಲಿ ವಿಜಯ ನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೇಶಿ ಹಬ್ಬ ಹಾಗೂ ಕಬಡ್ಡಿ ಪಂದ್ಯಾವಳಿಗಳನ್ನು ಕಳೆದ ಹಲವು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಮಾದರಿಯಾದದ್ದು, ನಗರದ ಉಳಿದ ಕಾಲೇಜುಗಳಲ್ಲಿಯೂ ದೇಶಿ ಹಬ್ಬ ಹಾಗೂ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಅವರು ಆಶಿಸಿದರು.
ಈ ವೇಳೆ ಪೂಜಾ ಕುಣಿತ, ಸೋಬಾನೆ ಹಾಡು, ಡೊಳ್ಳು ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ವಿವಿಧ ಕಾಲೇಜುಗಳ 16ತಂಡಗಳು ಭಾಗವಹಿಸಿದ್ದವು. ಈ ವೇಳೆ ವಸತಿ ಸಚಿವ ಎಂ.ಕೃಷ್ಣಪ್ಪ ದೇಶಿ ಹಬ್ಬಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಪೊಲೀಸ್ ಇನ್‌ಸ್ಪೆಕ್ಟರ್ ಜಯರಾಂ, ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಪಿ.ಬಹ್ಮನ ಪಾಡ್ ಮತ್ತಿತರರಿದ್ದರು.







