ಹೆಬ್ರಿ ಭೋಜ ಶೆಟ್ಟಿ ಕೊಲೆ ಪ್ರಕರಣ: ಜೂ. 4ರಿಂದ ವಿಚಾರಣೆ ಆರಂಭ

ಉಡುಪಿ, ಮಾ.12: ಹತ್ತು ವರ್ಷಗಳ ಹಿಂದೆ ನಕ್ಸಲರಿಂದ ಹತ್ಯೆಗೀಡಾದ ಹೆಬ್ರಿ ಭೋಜ ಶೆಟ್ಟಿ ಪ್ರಕರಣದ ವಿಚಾರಣೆಯು ಜೂ. 4ರಿಂದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಳ್ಳಲಿದೆ.
ಪ್ರಕರಣದ ವಿಚಾರಣೆ ಆರಂಭಕ್ಕೆ ಇಂದು ದಿನ ನಿಗದಿ ಪಡಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಜೂ. 4, 5, ಮತ್ತು 6ರಂದು ತಲಾ 10 ಮಂದಿ ಹಾಗೂ ಜೂ. 7ರಂದು 9 ಮಂದಿ ಸಾಕ್ಷದಾರರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳುವಂತೆ ಸಮನ್ಸ್ ಜಾರಿ ಮಾಡಲು ಆದೇಶ ನೀಡಿದರು.
ಈ ಸಂದರ್ಭ ತಮಿಳುನಾಡಿನ ಕೊಯಮತ್ತೂರು ಜೈಲಿನಲ್ಲಿದ್ದ ಈಶ್ವರ ಯಾನೆ ವೀರಮಣಿ, ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ನೀಲಗುಳಿ ಪದ್ಮನಾಭ ಮತ್ತು ಪಾವಗಡದ ಸಂಜೀವ ಕುಮಾರ್ ಅವರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಇನ್ನೋರ್ವ ಆರೋಪಿ ಬೆಂಗಳೂರು ಪರಪ್ಪರನ ಅಗ್ರಹಾರ ಜೈಲಿನಲ್ಲಿರುವ ರಮೇಶ್‌ನನ್ನು ಭದ್ರತೆ ಕಾರಣಕ್ಕೆ ಇಂದು ನ್ಯಾಯಾಲಯಕ್ಕೆ ಕರೆ ತಂದಿರಲಿಲ್ಲ.
ಈ ವೇಳೆ ಉಡುಪಿ ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಶನ್ ಶಾಂತಿ ಬಾಯಿ ಹಾಗೂ ಆರೋಪಿ ಪರ ವಕೀಲರಾದ ಶಾಂತರಾಮ್ ಶೆಟ್ಟಿ ಹಾಗೂ ಅಖಿಲ್ ಹೆಗ್ಡೆ ಹಾಜರಿದ್ದರು. ಬಳಿಕ ವೀರಮಣಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕೊಯಮತ್ತೂರು ಜೈಲಿಗೆ ಕರೆದುಕೊಂಡು ಹೋಗಲಾಯಿತು.
ನಕ್ಸಲ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂದು ಆರೋಪಿಸಿ ಹೆಬ್ರಿ ಸೀತಾನದಿಯ ಶಿಕ್ಷಕರಾಗಿದ್ದ ಭೋಜ ಶೆಟ್ಟಿಯನ್ನು 2008ರ ಮೇ 15ರಂದು ನಕ್ಸಲರ ತಂಡ ಗುಂಡು ಹಾರಿಸಿ ಕೊಲೆ ಮಾಡಿತ್ತು. ಇವರ ಜೊತೆ ಇದ್ದ ನೆರೆಮನೆಯ ಸುರೇಶ್ ಶೆಟ್ಟಿ ಕೂಡ ಈ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದ 11 ಆರೋಪಿಗಳ ವಿರುದ್ಧ ಪೊಲೀಸರು ದೋಷಾ ರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಅವರಲ್ಲಿ ಮನೋಹರ್ ಕಳಸದಲ್ಲಿ, ವಸಂತ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ದೇವೇಂದ್ರ, ನಂದ ಕುಮಾರ್, ಚಂದ್ರಶೇಖರ್, ಆಶಾ ಈಗಾಗಲೇ ಖುಲಾಸೆಗೊಂಡಿದ್ದಾರೆ. ಬಿ.ಜೆ.ಕೃಷ್ಣಮೂರ್ತಿಯನ್ನು ಈವರೆಗೆ ಬಂಧಿಸಿಲ್ಲ. ನೀಲಗುಳಿ ಪದ್ಮನಾಭ, ರಮೇಶ್, ವೀರಮಣಿ, ಸಂಜೀವ ಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
‘ಕಪಟ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ’
ನ್ಯಾಯಾಲಯಕ್ಕೆ ಹಾಜರಾಗಿ ಬಳಿಕ ವಾಪಾಸ್ಸು ಬಿಗಿ ಪೊಲೀಸ್ ಭದ್ರತೆ ಯಲ್ಲಿ ನ್ಯಾಯಾಲಯ ಆವರಣದಿಂದ ಹೊರಬರುತ್ತಿದ್ದ ಆರೋಪಿ ಶಂಕಿತ ನಕ್ಸಲ್ ವೀರಮಣಿ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ,ಕ್ರಾಂತಿಕಾರಿ ಘೋಷಣೆಗಳನ್ನು ಕೂಗಿದರು.
‘ಚುನಾವಣಾ ದಾರಿ ಕಳ್ಳರ ದಾರಿ, ನಕ್ಸಲ್ ದಾರಿ ವಿಮೋಚನಾ ದಾರಿ. ಕಪಟ ಚುನಾವಣೆಯನ್ನು ನಾವು ಬಹಿಷ್ಕರಿಸುತ್ತೇವೆ. ನಾವು ದೇಶ ಭಕ್ತರು, ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟವರು ದೇಶದ್ರೋಹಿಗಳು. ಭೂ ಹಂಚಿಕೆ ಆಗಲೇಬೇಕು. ಕೊಳ್ಳುವ ಶಕ್ತಿ ಹೆಚ್ಚಬೇಕು’ ಎಂಬ ಘೋಷಣೆಯನ್ನು ಕೂಗಿದ ವೀರಮಣಿ, ಪೊಲೀಸ್ ವ್ಯಾನ್ ಹತ್ತುವವರೆಗೂ ಅದನ್ನು ಮುಂದುವರೆಸಿದರು.







