ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ವಿಶೇಷ ಅಭಿಯೋಜಕರಾಗಿ ಶಾಂತರಾಮ್ ಶೆಟ್ಟಿ ಮುಂದುವರಿಕೆ
ಉಡುಪಿ, ಮಾ.12: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಶೇಷ ಅಭಿಯೋಜಕರಾಗಿ ಉಡುಪಿಯ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಅವರನ್ನೇ ಮುಂದುವರೆಸಿ ರಾಜ್ಯ ಸರಕಾರ ಇಂದು ಆದೇಶ ನೀಡಿದೆ.
ಶಾಂತರಾಮ್ ಶೆಟ್ಟಿ ಅವರನ್ನು ವಿಶೇಷ ಅಭಿಯೋಜಕರಾಗಿ ರಾಜ್ಯ ಸರಕಾರ 2016ರ ಅಕ್ಟೋಬರ್ 26ರಂದು ನೇಮಕ ಮಾಡಿತ್ತು. ನಂತರ ರಾಜ್ಯ ಸರಕಾರದ ಈ ಆದೇಶದ ವಿರುದ್ಧ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆ ತೆರವಿಗೆ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಹೈಕೋಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಫಣೀಂದ್ರ ಜ.31ರಂದು ವಿಶೇಷ ಅಭಿಯೋಜಕರ ನೇಮಕ ಕುರಿತ ತಡೆಯಾಜ್ಞೆ ಯನ್ನು ತೆರವುಗೊಳಿಸಿ ಈ ಬಗ್ಗೆ ಅಕ್ಷೇಪಗಳಿದ್ದರೆ ನೇಮಕ ಮಾಡಿರುವ ಸರಕಾರಕ್ಕೆ ಸಲ್ಲಿಸು ವಂತೆ ರಾಜೇಶ್ವರಿ ಶೆಟ್ಟಿಗೆ ಸೂಚಿಸಿದ್ದರು.
ಅದರಂತೆ ರಾಜೇಶ್ವರಿ ಶೆಟ್ಟಿ ವಿಶೇಷ ಅಭಿಯೋಜಕ ನೇಮಕ ಕುರಿತ ಆಕ್ಷೇಪಣೆ ಯನ್ನು ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯ ಗೃಹ ಕಾರ್ಯ ದರ್ಶಿಗೆ ಸಲ್ಲಿಸಿದ್ದರು. ಈ ಆಕ್ಷೇಪಣೆಗೆ ಪ್ರತಿಯಾಗಿ ಗುಲಾಬಿ ಶೆಡ್ತಿ ತನ್ನ ಆಕ್ಷೇಪಣೆಯನ್ನು ಫೆ.22ರಂದು ಸಲ್ಲಿಸಿದ್ದರು. ಇದೀಗ ರಾಜ್ಯ ಸರಕಾರ ರಾಜೇಶ್ವರಿ ಶೆಟ್ಟಿಯ ಆಕ್ಷೇಪಣೆಯನ್ನು ತಿರಸ್ಕರಿಸಿ, ಶಾಂತಾರಾಮ್ ಶೆಟ್ಟಿ ಅವರನ್ನು ವಿಶೇಷ ಅಭಿ ಯೋಜಕರಾಗಿ ಮುಂದುವರೆಸಿ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಾ.20ಕ್ಕೆ ಮುಂದೂಡಿಕೆ: ವಿಶೇಷ ಅಭಿಯೋಜಕರ ನೇಮಕದ ಪ್ರತಿ ನ್ಯಾಯಾಲಯಕ್ಕೆ ಸಲ್ಲಿಕೆ ಆಗದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಿಗದಿ ಪಡಿಸುವ ದಿನವನ್ನು ಮಾ.20ಕ್ಕೆ ಮುಂದೂಡಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಈ ಸಂದರ್ಭದಲ್ಲಿ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಭಾಯಿ, ಆರೋಪಿಗಳ ಪರ ವಕೀಲ ಅರುಣ್ ಬಂಗೇರ, ವಿಕ್ರಂ ಹೆಗ್ಡೆ ಹಾಜರಿದ್ದರು. ಇಂದಿನ ವಿಚಾರಣೆಯನ್ನು ಆರೋಪಿಗಳು ಇರುವ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಸಲಾಯಿತು.
ನಿರಂಜನ್ ಭಟ್ ಜಾಮೀನು ಅರ್ಜಿ ಸಲ್ಲಿಕೆ
ಪ್ರಕರಣದ ಆರೋಪಿ ನಂದಳಿಕೆ ನಿರಂಜನ್ ಭಟ್‌ಗೆ ಜಾಮೀನು ನೀಡುವಂತೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಇಂದು ಅರ್ಜಿಯನ್ನು ಸಲ್ಲಿಸಲಾಯಿತು.
ಪ್ರಕರಣದ ವಿಚಾರಣೆಯ ವಿಳಂಬವನ್ನು ಮುಂದಿಟ್ಟುಕೊಂಡು ಆರೋಪಿ ಪರ ವಕೀಲ ವಿಕ್ರಂ ಹೆಗ್ಡೆ ಈ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಇದಕ್ಕೆ ವಿಶೇಷ ಅಭಿಯೋಜಕ ಶಾಂತರಾಮ್ ಶೆಟ್ಟಿ ಅವರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಆದೇಶ ನೀಡಿದರು.
ನಿರಂಜನ್ ಭಟ್ ಈ ಹಿಂದೆ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಇದನ್ನು ಹೈಕೋರ್ಟ್ 2017ರ ಜು.26ರಂದು ತಿರಸ್ಕರಿಸಿ ಆದೇಶ ನೀಡಿತ್ತು. ಇದೀಗ ನಿರಂಜನ್ ಭಟ್ ಜಾಮೀನಿಗಾಗಿ ಎರಡನೆ ಬಾರಿಗೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗುತ್ತಿದೆ.







