ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ: ಚಂಪಾ

ಬೆಂಗಳೂರು, ಮಾ.12: ರಾಜ್ಯ ವ್ಯಾಪ್ತಿಯ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಗುತ್ತಿಗೆ ಹೊರಗುತ್ತಿಗೆ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಒತ್ತಾಯಿಸಿದರು.
ಸೋಮವಾರ ನಗರದ ಭಾರತೀಯ ದೂರವಾಣಿ ಕಾರ್ಖಾನೆ(ಐಟಿಐ) ಘಟಕಕ್ಕೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಐಟಿಐ ಕಾರ್ಖಾನೆಯಲ್ಲಿ ಬಹಳಷ್ಟು ಮಂದಿ ಕನ್ನಡದವರಿದ್ದಾರೆ. ಸಂಪೂರ್ಣವಾಗಿ ಕನ್ನಡ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಐಟಿಐ ಕಾರ್ಖಾನೆಯಲ್ಲಿ ಹೆಚ್ಚು ಕನ್ನಡೇತರ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೊರಗುತ್ತಿಗೆ ಆಧಾರದಲ್ಲಿ ಸಿ ಮತ್ತು ಡಿ ವೃಂದದ ನೇಮಕಾತಿ ಸಂದರ್ಭದಲ್ಲಿ ಡಾ.ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಶೇ.100ರಷ್ಟು ಹುದ್ದೆಗಳನ್ನು ಕಡ್ಡಾಯಾಗಿ ಮೀಸಲಿಡಬೇಕೆಂದು ಹೇಳಿದರು.
ಬೆಂಗಳೂರು ಘಟಕದಲ್ಲಿ ಅಂತರ್ಜಾಲ ತಾಣದಲ್ಲಿ ಕನ್ನಡ ಪುಟದ ಆಯ್ಕೆ, ತಂತ್ರಾಂಶದಲ್ಲಿ ಕನ್ನಡ ಅನುಷ್ಠಾನ, ನಾಮಫಲಕಗಳು ಸೂಚಿಗಳು ತ್ರಿಭಾಷಾ ಸೂತ್ರದನ್ವಯ ಕನ್ನಡದಲ್ಲಿರಬೇಕು. ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಕನ್ನಡ ಘಟಕದಿಂದ ಸಭೆ ಸೇರಿ ಚರ್ಚಿಸಿ, ಸಭೆಯ ನಡಾವಳಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಕೆ.ಮುರಳೀಧರ ಐಟಿಐ ಬೆಂಗಳೂರು ಘಟಕದ ಮುಖ್ಯಸ್ಥ ಮುರಳೀಧರ್, ಕಾರ್ಮಿಕ ಒಕ್ಕೂಟದ ಅಧ್ಯಕ್ಷರಾದ ಸಿದ್ಧಯ್ಯ, ತಿಮ್ಮಯ್ಯ, ನಾ.ಶೀಧರ್ ಸೇರಿದಂತೆ ಪ್ರಮುಖರಿದ್ದರು.







