ಮನೆಯಂಗಳದಲ್ಲಿ ಮಾತುಕತೆಯಲ್ಲಿ ಕೆ.ನೀಲಾ

ಬೆಂಗಳೂರು, ಮಾ.12: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿತಿಂಗಳು ನಡೆಸುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಈ ಬಾರಿ ಜನವಾದಿ ಸಂಘಟನೆಯ ನಾಯಕಿ ಹಾಗೂ ಲೇಖಕಿ ಕೆ.ನೀಲಾ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಹೋರಾಟಗಾರ್ತಿಯಾಗಿರುವ ಕೆ.ನೀಲಾರವರು ಕರ್ನಾಟಕ ಗ್ರಾಮೀಣ ಮಹಿಳಾ ಹೋರಾಟಗಾರ್ತಿಯರಲ್ಲಿ ಪ್ರಮುಖರಾಗಿದ್ದಾರೆ. ಪ್ರಸ್ತುತ ಕಲಬುರ್ಗಿಯಲ್ಲಿ ಪೂರ್ಣಾವಧಿ ಸಾಮಾಜಿಕ ಕಾರ್ಯಕರ್ತೆಯಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆಯಾಗಿ ಸಕ್ರಿಯರಾಗಿದ್ದಾರೆ.
ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯನ್ನು ಕೇಂದ್ರವಾಗಿಟ್ಟುಕೊಂಡು ಗ್ರಾಮೀಣ ಮಹಿಳೆಯ ಸಮಸ್ಯೆಗಳ ಕುರಿತು ದೊಡ್ಡ ಆಂದೋಲನ ರೂಪಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ಹೋರಾಟದ ಜೊತೆಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು, ತಮ್ಮ ಹೋರಾಟದ ಅನುಭವಗಳನ್ನು ಲೇಖಕಿಯಾಗಿ ಜನತೆಗೆ ಪರಿಯಿಸುತ್ತಾ ಬಂದಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ನಯನ ಸಭಾಂಗಣದಲ್ಲಿ ಮಾ.17ರಂದು ಸಂಜೆ 4ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಕೆ.ನೀಲಾ ಭಾಗವಹಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.





