ಕಂದಾಯ ಇಲಾಖೆ ಭೂಗಳ್ಳರ ಇಲಾಖೆಯಾಗಿ ಮಾರ್ಪಾಡು - ಗಿರಿಧರ ನಾಯ್ಕ
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

ಪುತ್ತೂರು, ಮಾ. 12: ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮೇರೆ ಮೀರಿದ್ದು, ಪ್ರತಿಯೊಂದು ಕೆಲಸಕ್ಕೂ ಲಂಚ ನೀಡುವ ಅನಿವಾರ್ಯತೆ ಸೃಷ್ಠಿಸುತ್ತಿದ್ದಾರೆ. ಬಡವರ ಕೆಲಸ ಮಾಡಲು ಹಿಂದೇಟು ಹಾಕುವ ಇಲ್ಲಿನ ಅಧಿಕಾರಿಗಳು ಶ್ರೀಮಂತರ ಪರವಾಗಿದ್ದಾರೆ. ಪ್ರತಿ ಕಚೇರಿಯಲ್ಲೂ ಹಣ ಕೀಳುವ ದಂಧೆ ನಡೆಯುತ್ತಿದೆ. ಕಂದಾಯ ಇಲಾಖೆ ಭೂಗಳ್ಳರ ಇಲಾಖೆ ಆಗಿ ಮಾರ್ಪಾಡಾಗಿದೆ ಎಂದು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕಾ ಆರೋಪಿಸಿದರು.
ಅವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರಿನ ಮಿನಿವಿಧಾನ ಸೌಧದ ಮುಂಬಾಗದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಗಿರಿಧರ ನಾಯ್ಕರವರು ಮಾತನಾಡಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಯಾವುದೇ ಪಕ್ಷವಲ್ಲ. ಇಲ್ಲಿ ಪಕ್ಷ ಅಗತ್ಯವೂ ಇಲ್ಲ. ಬಡಜನರಿಗೆ ಕೆಲಸ ಮಾಡುವ ಉದ್ದೇಶದಲ್ಲಿ ಈ ಸಂಘಟನೆ ಹುಟ್ಟಿಕೊಂಡಿದೆ. ಆದರೆ ಇವರು ಈ ಕುರಿತು ಶಾಸಕಿ ಶಕುಂತಳಾ ಶೆಟ್ಟಿಯವರು, ಸಚಿವ ರಮಾನಾಥ ರೈವರು ಇಲ್ಲಿನ ತಹಶೀಲ್ದಾರ್‌ಗೆ ಪೋನ್ ಮೂಲಕ ಬಡವರ ಕೆಲಸ ಮಾಡಲು ಒತ್ತಡ ಹಾಕಿದರೂ ಅಧಿಕಾರಿಗಳು ಅವರ ಮಾತಿಗೆ ಬೆಲೆ ಕೊಡದೆ ಇನ್ನೂ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಮುಂದೆ ವಿಧಾನ ಸಭೆ ಚುನಾವಣೆ ಮುನ್ನ ಆದಷ್ಟು ಬೇಗ ನಾವೆಲ್ಲ ಹೋರಾಟ ಮಾಡಬೇಕು. ಇವತ್ತು ನಮ್ಮ ಹೋರಾಟ ಶಾಂತವಾಗಿ ನಡೆಯಲಿದೆ. ನಮಗೆ ಯಾವುದೇ ಸ್ಪಂಧನೆ ಸಿಗದಿದ್ದಲ್ಲಿ ನಾಳೆಯ ದಿನ ಮಿನಿ ವಿಧಾನ ಸೌಧದ ಎದುರೇ ಕುಳಿತು ಅಥವಾ ಒಳಗೆ ಹೋಗಿ ಪ್ರತಿಭಟನೆ ಮಾಡಲಾಗುವುದು. ಇಲ್ಲಿ ನಮ್ಮ ಮೇಲೆ ಅವರಿಗೆ ತಾಕತ್ತಿದ್ದರೆ ಕೇಸು ಹಾಕಲಿ ಎಂದ ಅವರು ಪ್ರತಿಭಟನೆ ನಡೆಯುವ ಸ್ಥಳಕ್ಕೆ ತಹಶೀಲ್ದಾರ್ ಆಗಲಿ, ಸಹಾಯಕ ಕಮೀಷನರ್ ಆಗಲಿ ಬಂದು ಭರವಸೆ ಅಥವಾ ಲಿಖಿತ ರೂಪದಲ್ಲಿ ಭರವಸೆ ನೀಡುವುದು ಬೇಡ. ಈ ಹಿಂದೆಯೂ ಅವರು ಅದೇ ಮಾಡಿದ್ದು. ಈ ನಿಟ್ಟಿನಲ್ಲಿ ನಮ್ಮ ಬೇಡಿಕೆ ಈಡೇರಿಕೆ ಆಗುವ ತನಕ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಇರುವ ಡಿ.ಸಿ.ಮನ್ನಾ ಜಮೀನನ್ನು ಗುರುತಿಸುವ ಬಗ್ಗೆ ಹಾಗೂ ಅದನ್ನು ಭೂರಹಿತ ದಲಿತರಿಗೆ ಹಂಚುವ ಕುರಿತು ಅಹೋ ರಾತ್ರಿ ಪ್ರತಿಭಟನೆ ಮತ್ತು ಮನವಿಗಳನ್ನು ನೀಡಿದರೂ ಕಂದಾಯ ಇಲಾಖೆ ಟಾಸ್ಕ್ ಪೋರ್ಸ್ ಸಮಿತಿ ಮೂಲಕ ಪರಿಹಾರ ಕಂಡು ಕೊಳ್ಳುವ ಸುಳ್ಳು ಭರವಸೆ ನೀಡಿದಲ್ಲದೆ. ಇಲ್ಲಿನ ತನಕ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಅಧಿಕಾರಿಗಳು ದಲಿತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮ ಕೈಗೊಳ್ಳದಿದ್ದಲ್ಲಿ ಕಚೇರಿ ಮುತ್ತಿಗೆ ಹಾಕಲೂ ನಾವು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಬಾಲಚಂದ್ರ ಸೊರಕೆ ಮಾತನಾಡಿ ಕಳೆದ ಒಂದು ವರ್ಷದಿಂದ ಬಡವರಿಗಾಗಿ ನಿರಂತರ ನಮ್ಮ ಸಂಘಟನೆ ಹೋರಾಟ ಮಾಡುತ್ತಾ ಬಂದಿದೆ. ಆದರೆ ಅಧಿಕಾರಿಗಳು ಯಾವುದೆ ಸ್ಪಂಧನೆ ನೀಡದೆ ನಮ್ಮ ಮುಂದೆ ಕಣ್ಣಾಮುಚ್ಚಾಲೆ ಆಟ ಆಡುತ್ತಾರೆ. ಕಂದಾಯ ಇಲಾಖೆ ಬ್ರಹ್ಮಾಂಡ ಭ್ರಷ್ಟ ಅಧಿಕಾರಿಗಳಿಂದ ತುಂಬಿದೆ. 94 ಸಿ. ಅರ್ಜಿ, ಅಕ್ರಮ ಸಕ್ರಮ, ಕಡತ, ಆರ್.ಟಿ.ಸಿ ಕಡತಗಳು ಕಡತಗಳಾಗಿಯೇ ಉಳಿದಿದೆ. ಗಟ್ಟದಿಂದ ಬಂದ ಅಧಿಕಾರಿಗಳಿಂದಾಗಿ ಇಂದು ದಕ್ಷಿಣ ಕನ್ನಡದ ಅಧಿಕಾರಿಗಳಿಗೆ ಭ್ರಷ್ಟತೆ ಅಂಟಿಕೊಂಡಿದೆ. ಕಳೆದ ಭಾರಿ ಸಂಘಟನೆ ವತಿಯಿಂದ ಅಹೋ ರಾತ್ರಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ಬಂದು ಟಾಸ್ಕ್ ಪೋರ್ಸ್ ಸಮಿತಿ ರಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆದರೆ ಇವತ್ತಿನ ತನಕ ಟಾಸ್ಕ್ ಪೋರ್ಸ್ ಸಮಿತಿ ಸಭೆ ಕರೆದಿಲ್ಲ. ಇನ್ನೇನೂ ಕೆಲವೆ ದಿನಗಳಲ್ಲಿ ಚುನಾವಣೆ ಬರುವ ವೇಳೆ ನಮ್ಮ ಬೇಡಿಕೆಗಳಿಂದ ನುಸುಳಿಕೊಳ್ಳಬಹುದೆಂಬ ಇರಾದೆಯಿಂದ ಅಧಿಕಾರಿಗಳು ಯಾವ ಕೆಲಸ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ಆದಿತ್ಯವಾರದ ಒಳಗಡೆ ನಮ್ಮ ಬೇಡಿಕೆಯಲ್ಲೊಂದು ಡಿ.ಸಿ.ಮನ್ನಾ ಭೂಮಿ ಬಡವರಿಗೆ ನೀಡದಿದ್ದರೆ ಕೊಡಿಪ್ಪಾಡಿಯ ಪಡ್ಪುವಿನಲ್ಲಿರುವ ಜಾಗದಲ್ಲಿ ನಮ್ಮ ಸಂಘಟನೆ ವತಿಯಿಂದ ಗುಡಿಸಲು ಕಟ್ಟಿ ವಾಸ ಮಾಡಲಿದ್ದೇವೆ ಎಂದರು.
ಟಾಸ್ಕ್ ಪೋರ್ಸ್ ಸಮಿತಿ ರಚನೆ ಆಗಿ ಮೂರು ತಿಂಗಳು ಕಳೆದರೂ ಇಲ್ಲಿನ ತನಕ ಒಂದೇ ಒಂದು ಸಭೆ ನಡೆಸಿಲ್ಲ, ಕ್ಯಾಮಣ ಗ್ರಾಮದ ಸಜಂಕು ಎಂಬಲ್ಲಿ ನಾಲ್ಕು ತಿಂಗಳಾದರೂ ಸಂಪರ್ಕ ರಸ್ತೆ ಆಗದ ಕುರಿತು, 95 ಸಿ ಮತ್ತು 94 ಸಿಸಿಯಲ್ಲಿ ಅಧಿಕಾರಿಗಳಿಂದ ಲಂಚದ ಬೇಡಿಕೆ, ಜಮೀನು ಭೂಪರಿವರ್ತನೆಗೆ ಈಗಿರುವ ಸುತ್ತೋಲೆಯನ್ನು ರದ್ದು ಪಡಿಸಲು, ಅಕ್ರಮ ಸಕ್ರಮ ಜಮೀನನ್ನು ಪ್ಲಾಟಿಂಗ್ ಮಾಡಲು ಏಕ ವ್ಯಕ್ತಿ ಕೋರಿಕೆಯಡಿ ಅರ್ಜಿ ಸಲ್ಲಿಸಿದರೂ ಡಿಡಿಎಲ್‌ಆರ್‌ರವರು ಆಕಾರಬಂದ್ ಮತ್ತು ಪಹಣಿ ತಾಳೆ ಇರುವುದಿಲ್ಲ ಎಂದು ಹಣದ ಬೇಡಿಕೆಗಾಗಿ ಕಡತ ತಿರಸ್ಕರಿಸುವ ಕುರಿತು, ಸರಕಾರ ಮಂಜೂರಾತಿ ಮಾಡಿದ ಜಮೀನನ್ನು ಫಲಾನುಭವಿಗಳು ಯಾವುದೇ ಅರ್ಜಿಕೊಡದೇ ಸರಕಾರವೇ ಪ್ಲಾಟಿಂಗ್ ಮಾಡಿ ಕೊಡುವ ಬಗ್ಗೆ, ಭೂಮಿ ಶಾಖೆಯಲ್ಲಿ ಕಳೆದ 3 ತಿಂಗಳಿನಿಂದ ಪಹಣಿ ದುರಸ್ಥಿ ಮಾಡದಿರುವ ಬಗ್ಗೆ, ಕಂದಾಯ ಇಲಾಖೆಯ ಉಪತಹಶೀಲ್ದಾರ್ ತನ್ನ ಪತ್ನಿಗೆ ಸರಕಾರಿ ಇಲಾಖೆಯ ಕಾನೂನು ದುರುಪಯೋಗ ಮಾಡಿ 94ಸಿ ಯಡಿ ಹಕ್ಕುಪತ್ರ ನೀಡಿದ್ದು, ಅವರನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಖಾದರ್ ಅದ್ದಿ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜತ್ತಪ್ಪ ಗೌಡ, ರಾಜ್ಯ ಕಾರ್ಯದರ್ಶಿ ಪ್ರಮೋದ್, ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ತ್ಯಾಗರಾಜನಗರ, ಮಹಿಳಾ ಅಧ್ಯಕ್ಷೆ ಆಶಾ ಸೊರಕೆ, ಸುಳ್ಯ ತಾಲೂಕು ಅಧ್ಯಕ್ಷ ಸುಂದರ, ರಾಜ್ಯ ಗೌರವ ಸಲಹೆಗಾರ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.







