ಕೃಷ್ಣಪ್ಪ ಕೊಂಚಾಡಿಯವರಿಗೆ ಪಿಎಚ್‌ಡಿ ಪ್ರದಾನ

ಮಂಗಳೂರು, ಮಾ. 12: ಹಂಪಿ ಕನ್ನಡ ವಿಶ್ವವಿದ್ಯಾಲಯದ 26ನೆ ಘಟಿಕೋತ್ಸವವು ಮಾ. 10ರಂದು ಹಂಪಿಯಲ್ಲಿ ಜರಗಿದ್ದು, ಘಟಿಕೋತ್ಸವ ದಲ್ಲಿ ನಗರದ ಕೃಷ್ಣಪ್ಪ ಕೊಂಚಾಡಿ ಅವರಿಗೆ ಪಿಎಚ್‌ಡಿ ಪದವಿಯನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ಸಮಕುಲಾಧಿಪತಿ ಆಗಿರುವ ಬಸವರಾಜ ರಾಯರೆಡ್ಡಿ ಅವರು ಪ್ರದಾನ ಮಾಡಿದರು.
ಕೃಷ್ಣಪ್ಪ ಕೊಂಚಾಡಿ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿರುವ ಡಾ.ವಿಜಯ್ ಪೂಣಚ್ಚ ತಂಬಂಡ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಕರಾವಳಿ ಕರ್ನಾಟಕದಲ್ಲಿ ವಾಣಿಜ್ಯೋದ್ಯಮ ಮತ್ತು ಸಂಘರ್ಷ - ಯುರೋಪಿಯನ್ನರ ಆಗಮನದಿಂದ ವಸಾಹತುಶಾಹಿ ಕಾಲಘಟ್ಟದವರೆಗೆ ಎಂಬ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಲಾಯಿತು.
ಕೃಷ್ಣಪ್ಪ ಕೊಂಚಾಡಿ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಕಲಾ ಪದವಿ ಹಾಗೂ ಕಾನೂನು ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯುನಿವರ್‌ಸಿಟಿ ನವದೆಹಲಿ (ಇಗ್ನೋ)ಯಿಂದ ಚರಿತ್ರೆಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ.
ಮದ್ರಾಸ್ ವಿಶ್ವವಿದ್ಯಾಲಯದಿಂದ ಭೂಗೋಳಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನೂ, ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದಿರುತ್ತಾರೆ. ಇನ್ಶೂರೆನ್ಸ್‌ಗೆ ಸಂಬಂಧಿಸಿ ಇನ್ಶೂರೆನ್ಸ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಮುಂಬಯಿ ಇಲ್ಲಿಂದ ಉನ್ನತ ತಾಂತ್ರಿಕ ಪದವಿಯನ್ನು ಪಡೆದಿದ್ದಾರೆ.
ಇವರು ಕೊಂಚಾಡಿ ಶ್ರೀರಾಮಾಶ್ರಮ ಪ್ರೌಢ ಮತ್ತು ಪ್ರಾಥಮಿಕ ಶಾಲೆ, ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ) ಮಂಗಳೂರು, ಬದ್ರಿಯಾ ಜೂನಿಯರ್ ಕಾಲೇಜ್, ಕೆನರಾ ಕಾಲೇಜ್, ಸಂತ ಅಲೋಶಿಯಸ್ ಸಂಧ್ಯಾ ಕಾಲೇಜ್ ಹಾಗೂ ಎಸ್‌ಡಿಎಮ್ ಕಾನೂನು ಕಾಲೇಜ್‌ಗಳ ಹಳೆ ವಿದ್ಯಾರ್ಥಿಯಾಗಿದ್ದಾರೆ.
ಎಡಪಂಥೀಯ ವಿದ್ಯಾರ್ಥಿ ಯುವಜನ ಸಂಘಟನೆಗಳಿಗೆ ನಾಯಕತ್ವ ನೀಡಿದ್ದ ಅವರು 2011ರಲ್ಲಿ ಅಲ್ಜೀರಿಯಾದಲ್ಲಿ ಜರಗಿದ ವಿಶ್ವ ವಿದ್ಯಾರ್ಥಿ ಯುವಜನ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರಗತಿಪರ ಚಿಂತಕರ ವೇದಿಕೆ ಮಂಗಳೂರು ಇದರ ಕಾರ್ಯದರ್ಶಿಯಾಗಿದ್ದು, ದ.ಕ. ಜಿಲ್ಲಾ ವಿಚಾರವಾದಿ ಸಂಘದ ಸಹಕಾರ್ಯದರ್ಶಿಯಾಗಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾಗಿದ್ದಾರೆ. ಇವರಿಂದ ಅರ್ಥಶಾಸ್ತ್ರ, ಚರಿತ್ರೆ ಹಾಗೂ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಹಲವಾರು ಲೇಖನಗಳು ಪ್ರಕಟವಾಗಿವೆ. ಇದೇ ರೀತಿ ಭಾಷಾಂತರ ಮತ್ತು ಚರಿತ್ರೆಗೆ ಸಂಬಂಧ ಪಟ್ಟಂತೆ ಕೆಲವು ಕೃತಿಗಳು ಪ್ರಕಟವಾಗಿವೆ. ಇವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಕಾರ್ಯನಿರ್ವಸುತ್ತಿದ್ದಾರೆ.







