ಯುಎಇಯಿಂದ ಟರ್ಕಿಗೆ ಹೋಗುತ್ತಿದ್ದ ವಿಮಾನ ಪತನ: ಎಲ್ಲ 11 ಮಂದಿ ಸಾವು

ಟೆಹರಾನ್ (ಇರಾನ್), ಮಾ. 12: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ರವಿವಾರ ಮಹಿಳೆಯರ ಗುಂಪೊಂದನ್ನು ಟರ್ಕಿಯ ಇಸ್ತಾಂಬುಲ್‌ಗೆ ಸಾಗಿಸುತ್ತಿದ್ದ ಖಾಸಗಿ ವಿಮಾನವೊಂದು ಭಾರೀ ಮಳೆಯಿಂದಾಗಿ ಇರಾನ್‌ನ ಪರ್ವತ ಪ್ರದೇಶವೊಂದರಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲ 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲವೇ ದಿನಗಳ ಮೊದಲು, ಈ ವಿಮಾನವು ಈ ಯುವ ಮಹಿಳೆಯರನ್ನು ದುಬೈಗೆ ಕರೆದೊಯ್ದಿತ್ತು.
ವಿಮಾನವು ಶಾಹರ್-ಇ ಕೊರ್ಡ್ ಸಮೀಪ ಪರ್ವತಕ್ಕೆ ಢಿಕ್ಕಿ ಹೊಡೆಯಿತು ಹಾಗೂ ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು ಎಂದು ದೇಶದ ತುರ್ತು ಪರಿಸ್ಥಿತಿ ನಿರ್ವಹಣೆ ಸಂಸ್ಥೆಯ ವಕ್ತಾರರನ್ನು ಉಲ್ಲೇಖಿಸಿ ಇರಾನ್‌ನ ಸರಕಾರಿ ಟೆಲಿವಿಶನ್ ವರದಿ ಮಾಡಿದೆ.
ಶಾಹರ್-ಇ ಕೊರ್ಡ್ ಇರಾನ್ ರಾಜಧಾನಿ ಟೆಹರಾನ್‌ನಿಂದ ಸುಮಾರು 370 ಕಿ.ಮೀ. ದೂರದಲ್ಲಿದೆ.
ಝಾಗ್ರೊಸ್ ಪರ್ವತಶ್ರೇಣಿಯಲ್ಲಿ ವಿಮಾನ ಪತನಗೊಂಡಿರುವ ಸ್ಥಳವನ್ನು ಸ್ಥಳೀಯ ಗ್ರಾಮಸ್ಥರು ತಲುಪಿದ್ದಾರೆ ಎಂದು ವಕ್ತಾರರು ಹೇಳಿದರು. ಅಲ್ಲಿ ಅವರಿಗೆ ಸುಟ್ಟು ಕರಕಲಾದ ದೇಹಗಳು ಮಾತ್ರ ಕಂಡಿದ್ದು, ಬದುಕಿರುವವರು ಯಾರೂ ಪತ್ತೆಯಾಗಿಲ್ಲ ಎಂದರು.





