ಶಿವಮೊಗ್ಗ: ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರು ಮೃತ್ಯು
10 ಮಂದಿಗೆ ಗಾಯ
![ಶಿವಮೊಗ್ಗ: ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರು ಮೃತ್ಯು ಶಿವಮೊಗ್ಗ: ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರು ಮೃತ್ಯು](https://www.varthabharati.in/sites/default/files/images/articles/2018/03/12/accident-759_0.jpg)
ಶಿವಮೊಗ್ಗ, ಮಾ. 12: ಜಿಲ್ಲೆಯ ಶಿಕಾರಿಪುರ ಹಾಗೂ ಸೊರಬ ತಾಲೂಕು ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟು, 10 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಶಿಕಾರಿಪುರ ವರದಿ: ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಶಿರಿಹಳ್ಳಿ ಗ್ರಾಮದಲ್ಲ ಟ್ರ್ಯಾಕ್ಟರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟು, ಒಂಬತ್ತು ಜನರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಕಮಲಮ್ಮ (50) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯೋರ್ವರ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ತೆರಳಿ ಮನೆಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ ಚಾಲಕನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೊರಬ ವರದಿ: ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ತಲ್ಲೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ವೊಂದರಲ್ಲಿದ್ದ ಚಾಲಕ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಚುಂಚನಕೊಪ್ಪ ಗ್ರಾಮದ ಮಂಜುನಾಯ್ಕ್ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇವರ ಸಂಬಂಧಿಯೋರ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.