ಮೆಂಡಿಸ್ ಅರ್ಧಶತಕ: ಶ್ರೀಲಂಕಾ 152/9

ಕೊಲಂಬೊ, ಮಾ.12: ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ಅರ್ಧಶತಕದ ಕೊಡುಗೆಯ ಸಹಾಯದಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯದಲ್ಲಿ 19 ಓವರ್‌ಗಳಲ್ಲಿ 9 ವಿಕೆಟ್‌ಗೆ 152 ರನ್ ಗಳಿಸಿದೆ.
ಭಾರತದ ವೇಗದ ಬೌಲರ್ ಶಾರ್ದೂಲ್ ಠಾಕೂರ್ 19ನೇ ಓವರ್‌ನ ಸತತ ಎಸೆತಗಳಲ್ಲಿ ಎರಡು ವಿಕೆಟ್ ಸಹಿತ 27 ರನ್ ನೀಡಿ ಒಟ್ಟು 4 ವಿಕೆಟ್ ಉಡಾಯಿಸಿದರು. ಸುಂದರ್(2-21) ಠಾಕೂರ್‌ಗೆ ಉತ್ತಮ ಸಾಥ್ ನೀಡಿದರು.
ಸೋಮವಾರ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪಂದ್ಯವನ್ನು 19 ಓವರ್‌ಗೆ ಕಡಿತಗೊಳಿಸಲಾಯಿತು.
2.1 ಓವರ್‌ಗಳಲ್ಲಿ 25 ರನ್ ಗಳಿಸಿದ ಗುಣತಿಲಕ(17) ಹಾಗೂ ಮೆಂಡಿಸ್(55 ರನ್, 38 ಎಸೆತ, 3 ಬೌಂಡರಿ, 3 ಸಿಕ್ಸರ್) ಉತ್ತಮ ಆರಂಭ ನೀಡಿದರು. ಈ ಜೋಡಿಯನ್ನು ಶಾರ್ದೂಲ್ ಠಾಕೂರ್ ಬೇರ್ಪಡಿಸಿದರು.
ಕುಸಾಲ್ ಪೆರೇರ (3) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆಗ 3ನೇ ವಿಕೆಟ್‌ಗೆ 62 ರನ್ ಜೊತೆಯಾಟ ನಡೆಸಿದ ತರಂಗ(22) ಹಾಗೂ ಮೆಂಡಿಸ್ ತಂಡದ ಸ್ಕೋರನ್ನು 100ರ ಗಡಿ ತಲುಪಿಸಿದರು.
24 ಎಸೆತಗಳಲ್ಲಿ 22 ರನ್ ಗಳಿಸಿದ ತರಂಗ ಅವರು ವಿಜಯ್ ಶಂಕರ್‌ಗೆ ಕ್ಲೀನ್‌ಬೌಲ್ಡಾದರು. ನಾಯಕ ತಿಸಾರ ಪೆರೇರ 6 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 15 ರನ್ ಗಳಿಸಿ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು. ನಿಧಾನಗತಿಯ ಬೌಲಿಂಗ್ ಕಾಯ್ದುಕೊಂಡ ಕಾರಣಕ್ಕೆ ದಿನೇಶ್ ಚಾಂಡಿಮಾಲ್ 2 ಪಂದ್ಯಗಳಿಂದ ನಿಷೇಧಕ್ಕೆ ಒಳಗಾಗಿದ್ದು, ದಿನೇಶ್ ಅನುಪಸ್ಥಿತಿಯಲ್ಲಿ ಪೆರೇರ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.







