ಸಿರಿಯ ಸಂಘರ್ಷದಲ್ಲಿ ಮಕ್ಕಳು ಹೆಚ್ಚಿನ ಅಪಾಯಕ್ಕೆ: ಯುನಿಸೆಫ್ ವರದಿ

ಬೈರೂತ್ (ಲೆಬನಾನ್), ಮಾ. 12: ಸಿರಿಯದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಸಂಘರ್ಷದಲ್ಲಿ ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.
ಸಿರಿಯದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧದಲ್ಲಿ 2016ಕ್ಕೆ ಹೋಲಿಸಿದರೆ 2017ರಲ್ಲಿ ದುಪ್ಪಟ್ಟು ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ವರದಿಯೊಂದರಲ್ಲಿ ತಿಳಿಸಿದೆ.
‘‘2017ರಲ್ಲಿ ಭೀಕರ ಹಾಗೂ ವಿವೇಚನಾರಹಿತ ಹಿಂಸಾಚಾರದಲ್ಲಿ ಅತಿ ಹೆಚ್ಚಿನ ಮಕ್ಕಳು ಮೃತರಾಗಿದ್ದಾರೆ. 2016ರ ಸಂಖ್ಯೆಗಿಂತ ಇದು ದುಪ್ಪಟ್ಟಾಗಿದೆ’’ ಎಂದು ವರದಿ ಹೇಳಿದೆ.
2018ರ ಲಕ್ಷಣಗಳನ್ನು ನೋಡಿದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗುವ ಸಾಧ್ಯತೆಗಳಿವೆ ಎಂದು ಅದು ಎಚ್ಚರಿಸಿದೆ.
ಪೂರ್ವ ಘೌಟದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶಗಳ ಮೇಲೆ ಸಿರಿಯದ ಸರಕಾರಿ ಸೇನೆ ಫೆಬ್ರವರಿ 18ರಿಂದ ನಡೆಸುತ್ತಿರುವ ನಿರಂತರ ದಾಳಿಗಳಲ್ಲಿ ಈಗಾಗಲೇ 200ಕ್ಕೂ ಅಧಿಕ ಮಂದಿ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.





