ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ: ಅಭಯಚಂದ್ರ ಜೈನ್

ಮೂಡುಬಿದಿರೆ, ಮಾ.12: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನನ್ನು ಕರಿಂಜೆ ಸ್ವಾಮೀಜಿ ರಾಕ್ಷಸ ಎಂದು ಸಭೆಯೊಂದರಲ್ಲಿ ಆರೋಪಿಸಿದ್ದಾರೆ. ನನ್ನನ್ನು ಟೀಕಿಸಿದರೆ ಪರ್ವಾಗಿಲ್ಲ ಆದರೆ ಮುಖ್ಯಮಂತ್ರಿಯನ್ನು ಬೈದರೆ ಅವರು ಯಾವ ಸ್ವಾಮೀಜಿಯಾದರು ಸುಮ್ಮನೆ ಬಿಡುವುದಿಲ್ಲ. ತಾಕತ್ತಿದ್ದರೆ ಕರಿಂಜೆ ಸ್ವಾಮೀಜಿ ಚುನಾವಣೆಗೆ ನಿಲ್ಲಲಿ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದ್ದಾರೆ.
ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮಾ.20ರಂದು ಮಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಲ್ಕಿಯಲ್ಲಿ ನಡೆಯಲಿರುವ ಸ್ವಾಗತ ಕಾರ್ಯಕ್ರಮದ ಬಗ್ಗೆ ಸೋಮವಾರ ಸಂಜೆ ಮೂಡುಬಿದಿರೆ ಕಾಂಗ್ರೆಸ್ ಕಚೇರಿಯಲ್ಲಿ ಜರಗಿದ ಪೂರ್ವ ಸಿದ್ಧತೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರಿಂಜೆ ಸ್ವಾಮೀಜಿ ಸರಕಾರಿ ಜಾಗ ಕಬಳಿಸಿದ್ದಾರೆ. ಅದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ನನಗೆ 69 ವರ್ಷ ವಯಸ್ಸಾಗಿದೆ. ಇನ್ನೊಮ್ಮೆ ಎಂಎಲ್‌ಎ ಆಗಬೇಕೆಂಬ ಆಸೆ ಇಲ್ಲ. ಆದರೆ ಕಾರ್ಯಕರ್ತರ ರಕ್ಷಣೆಗೋಸ್ಕರ, ಪಕ್ಷದ ಹಿತಕ್ಕೋಸ್ಕರ ಕಾಂಗ್ರೆಸ್ ಗೆಲ್ಲಬೇಕು ಮತ್ತು ಈ ಮೂಲಕ ಯುವನಾಯಕ ರಾಹುಲ್‌ಗಾಂಧಿ ಕೈ ಬಲಪಡಿಸಬೇಕಾಗಿದೆ. ಪ್ರತಾಪ್‌ಚಂದ್ರ ಶೆಟ್ಟಿ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ವಿರುದ್ಧ ಪಿತೂರಿ ಪ್ರಾರಂಭವಾಗಿತ್ತು. ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ಗೆ ಹಿಂದಿನಿಂದ ಚೂರಿ ಹಾಕಿದವರು ಯಾರೂ ಪ್ರಗತಿ ಹೊಂದಿಲ್ಲ. ಪಿತೂರಿ ನಡೆಸಿದವರು ಯಾರೆಂಬುದು ನನಗೆ ಗೊತ್ತಿದೆ. ಚುನಾವಣೆ ನಂತರ ಅವರಿಗೆ ಉತ್ತರ ನೀಡುವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಮಾತನಾಡಿ, ಪಕ್ಷದ ಕಾರ್ಯಕರ್ತರು ಎರಡು ತಿಂಗಳು ಸಂಘಟಿತರಾಗಿ ಕೆಲಸ ಮಾಡಿದರೆ ಮತ್ತೆ ಐದು ವರ್ಷ ನಮ್ಮ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನಕರ ಶೆಟ್ಟಿ, ಸಂಜೀವ ಮೊಯ್ಲಿ, ರುಕ್ಕಯ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







