ಸೊರಬ: ಬಿಜೆಪಿ ತಾಲೂಕು ಘಟಕ ವತಿಯಿಂದ ನವಶಕ್ತಿ ಸಮಾವೇಶ

ಸೊರಬ,ಮಾ.12: ಶಾಸಕ ಮಧು ಬಂಗಾರಪ್ಪ ಅವರ ದುರಾಡಳಿತ ಕೊನೆಗಾಣಿಸಲು ಬಿಜೆಪಿ ಕಾರ್ಯಕರ್ತರು ಮುಂದಾಗದಿದ್ದರೆ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಅವರ ದುಂಡಾವರ್ತನೆ ಮುಂದುವರೆಯಲಿದೆ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹೇಳಿದರು.
ಸೋಮವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕ ಸೋಮವಾರ ಹಮ್ಮಿಕೊಂಡಿದ್ದ ನವಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಗರ್ ಹುಕುಂ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿರುವ ಶಾಸಕರು, ನಿಜವಾದ ಬಡವರಿಗೆ ಹಾಗೂ ದಶಕಗಳ ಕಾಲ ಸಾಗುವಳಿ ಮಾಡಿರುವ ಅರ್ಹ ಫಲಾನುಭವಿಗಳಿಗೆ ಭೂಮಿ ಹಕ್ಕು ನೀಡಿಲ್ಲ. ಬದಲಾಗಿ ಲಕ್ಷಾಂತರ ರೂಪಾಯಿ ಹಣ ನೀಡಿದವರಿಗೆ ಮಾತ್ರ ಹಕ್ಕುಪತ್ರ ನೀಡಿದ್ದಾರೆ ಎಂದು ಆರೋಪಿಸಿದರು.
ತಂದೆ ಎಸ್.ಬಂಗಾರಪ್ಪ ಹೆಸರನ್ನು ಬಳಸಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಶಾಸಕರಿಗೆ ರಾಜಕೀಯದಲ್ಲಿ ಯಾವುದೇ ಅನುಭವ ಇಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ತಂದೆ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿರುವ ಬಂಗಾರಪ್ಪ ಅವರ ಸಮಾಧಿ ಸ್ಥಳವನ್ನು ಇದುವರೆಗೂ ಸ್ಮಾರಕವಾಗಿ ನಿರ್ಮಿಸಲು ಸಾಧ್ಯವಾಗಿಲ್ಲ. ಇಂತಹವರು ಸಾಮಾನ್ಯ ಜನರಿಗೆ ಯಾವ ನ್ಯಾಯ ಒದಗಿಸುತ್ತಾರೆ ಎಂದು ಪ್ರಶ್ನಿಸಿದರು.
ಕುಮಾರ್ ಬಂಗಾರಪ್ಪ ಮಾತನಾಡಿ, ಮತ ನೀಡಿದ ಪ್ರತಿಯೊಬ್ಬರ ಮೇಲೂ ಪರೋಕ್ಷವಾಗಿ ಅನ್ಯಾಯ ಮಾಡಿದ ಶಾಸಕ ಮಧು ಬಂಗಾರಪ್ಪ ಅವರ ಗೂಂಡಾಗಿರಿಯನ್ನು ಅಂತ್ಯಗಿಳಿಸಲು ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲಾಗುತ್ತಿದೆ. ಅಭಿಮಾನದಿಂದ ತಾಲೂಕಿನ ಜನರು ಬಂಗಾರಪ್ಪ ಅವರ ಪುತ್ಥಳಿಯನ್ನು ನಿರ್ಮಿಸಲು ಮುಂದಾದರೆ ಶಾಸಕರು ಜಿದ್ದಿಗೆ ಬಿದ್ದು ಪುತ್ಥಳಿ ನಿರ್ಮಿಸಲು ಬಿಡಲಿಲ್ಲ. ಇದರಿಂದ ಪುತ್ಥಳಿ ವಿಚಾರ ಸರ್ಕಾರಿ ಕಚೇರಿಯಲ್ಲಿ ಧೂಳು ಹಿಡಿಯುವಂತೆ ಮಾಡಿದ್ದಾರೆ ಎಂದು ದೂರಿದರು.
ಕಾರ್ಯಮವನ್ನು ಎಂಎಡಿಬಿ ಮಾಜಿ ಅಧ್ಯಕ್ಷ ಪದ್ಮನಾಭ್ ಭಟ್ ಉದ್ಘಾಟಿಸಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್ ಶಾಸಕರ ಭ್ರಷ್ಟಾಚಾರದ ದೋಷಾರೋಪ ಪಟ್ಟಿ ಬಿಡುಗಡೆಗೊಳಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಎಲ್.ಅರವಿಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯರಾದ ಸತೀಶ್, ರಾಜಶೇಖರ ಗಾಳಿಪುರ, ಎಪಿಎಂಸಿ ಸದಸ್ಯರಾದ ನಾಗರಾಜ್, ದಯಾನಂದ್, ಶಿವರಾಜಗೌಡ, ಮುಖಂಡರಾದ ಎಂ.ಡಿ.ಉಮೇಶ್, ತಬಲಿ ಬಂಗಾರಪ್ಪ, ಶ್ರೀಪಾದ ಹೆಗಡೆ, ಗೀತಾಮಲ್ಲಿಕಾರ್ಜುನ್, ನಿರಂಜನ, ಯೋಗೇಶ್, ಮಲ್ಲಿಕಾರ್ಜುನ, ಅನ್ವರ ಸಾಬಾ, ಗುರುಪ್ರಸನ್ನಗೌಡ, ಶೆಬ್ಬಿರ್ ಕಿಲ್ಲಿದಾರ್, ಚಂದ್ರಪ್ಪ, ದಿವಾಕರ್ ಭಾವೆ, ಗಜಾನನರಾವ್, ಈಶ್ವರ ಚನ್ನಪಟ್ಟಣ ಮತ್ತಿತರರಿದ್ದರು.







