ಚಾಮರಾಜನಗರ: ನೂತನ ಜಿಲ್ಲಾಧಿಕಾರಿಯಾಗಿ ಬಿ.ಬಿ. ಕಾವೇರಿ ಅಧಿಕಾರ ಸ್ವೀಕಾರ

ಚಾಮರಾಜನಗರ, ಮಾ.12: ನೂತನ ಜಿಲ್ಲಾಧಿಕಾರಿಯಾಗಿ ಬಿ.ಬಿ. ಕಾವೇರಿ ಅವರು ಇಂದು ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಅವರಿಂದ ಅಧಿಕಾರ ಸ್ವೀಕರಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೂತನ ಜಿಲ್ಲಾಧಿಕಾರಿ ಕಾವೇರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಬಿ. ರಾಮು ಅವರು ನೂತನ ಜಿಲ್ಲಾಧಿಕಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕಾವೇರಿ, ಕೋಲಾರದಿಂದ ತಾನು ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಮುಂದೆ ಎದುರಾಗುವ ಚುನಾವಣೆ ಕಾರ್ಯಗಳಿಗೆ ಸಿದ್ಧತೆ ನಡೆಸಬೇಕಿದೆ. ಜತೆಗೆ ಅಭಿವೃದ್ಧಿ ಕೆಲಸಗಳಿಗೂ ಗಮನ ನೀಡಬೇಕಿದೆ. ಒಳ್ಳೆಯ ಕೆಲಸಗಳಿಗೆ ಎಲ್ಲರ ನೆರವು ಬೇಕಿದೆ ಎಂದರು.
ಚಾಮರಾಜನಗರ ಜಿಲ್ಲೆಯು ಅರಣ್ಯ ಪ್ರದೇಶದಿಂದ ಹೆಚ್ಚು ಕೂಡಿದೆ. ಬುಡಕಟ್ಟು ವರ್ಗಗಳ ಜನರೂ ಸಹ ಸಾಕಷ್ಟು ಮಂದಿ ಇದ್ದಾರೆ. ಅಭಿವೃದ್ಧಿ ಎಂದರೆ ಕೇವಲ ಪಟ್ಟಣದ ಪ್ರಗತಿ ಮಾತ್ರ ಆಗುವುದಿಲ್ಲ. ಎಲ್ಲಾ ಭಾಗಗಳೂ ಸಹ ಅಭಿವೃದ್ಧಿಯಾದರೆ ಸಮಗ್ರ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನೂತನ ಜಿಲ್ಲಾಧಿಕಾರಿ ಕಾವೇರಿ ಹೇಳಿದರು.
ಇದೇ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಇತರೆ ಅಧಿಕಾರಿಗಳು ಹಾಜರಿದ್ದರು.





