ಇಂಡಿಯನ್ ವೆಲ್ಸ್: ಫೆಡರರ್ ನಾಲ್ಕನೇ ಸುತ್ತಿಗೆ ಲಗ್ಗೆ

ಇಂಡಿಯನ್ ವೆಲ್ಸ್, ಮಾ.13: ವಿಶ್ವದ ನಂ.1 ಆಟಗಾರ ರೋಜರ್ ಫೆಡರರ್ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಆರನೇ ಬಾರಿ ಪ್ರಶಸ್ತಿ ಜಯಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಸೋಮವಾರ ಕೇವಲ 58 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಫೆಡರರ್ ಸರ್ಬಿಯದ ಫಿಲಿಪ್ ಕ್ರಾಜಿನೊವಿಕ್‌ರನ್ನು 6-2, 6-1 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ನಾಲ್ಕನೇ ಸುತ್ತಿಗೆ ತೇರ್ಗಡೆಯಾದರು.
ಹಾಲಿ ಚಾಂಪಿಯನ್ ಫೆಡರರ್ ಕ್ಯಾಲಿಫೋರ್ನಿಯಾದ ಸೆಂಟರ್ ಸ್ಟೇಡಿಯಂನಲ್ಲಿ ಹ್ಯಾಟ್ರಿಕ್ ಪ್ರಶಸ್ತಿಯೊಂದಿಗೆ ಒಟ್ಟು ಆರನೇ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸುವ ವಿಶ್ವಾಸದಲ್ಲಿದ್ದಾರೆ.
ಫೆಡರರ್ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಸಹಿತ ಈಗಾಗಲೇ ಎರಡು ಪ್ರಶಸ್ತಿ ಜಯಿಸಿದ್ದಾರೆ. ಫೆಡರರ್ ಮುಂದಿನ ಸುತ್ತಿನಲ್ಲಿ ಬ್ರಿಟನ್‌ನ ಜೆರೆಮಿ ಚಾರ್ಡಿ ಅವರನ್ನು ಎದುರಿಸಲಿದ್ದಾರೆ. ಚಾರ್ಡಿ ಫ್ರಾನ್ಸ್‌ನ ಅಡ್ರಿಯನ್ ಮನ್ನಾರಿನೊರನ್ನು 7-5, 4-6, 6-1 ಅಂತರದಿಂದ ಸೋಲಿಸಿದ್ದಾರೆ.
ವೋಝ್ನಿಯಾಕಿಗೆ ಜಯ:
ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕರೊಲಿನ್ ವೋಝ್ನಿಯಾಕಿ ಬೆಲಾರಸ್‌ನ ಅಲಿಯಾಕ್‌ಸಾಂಡ್ರಾ ಸಾಸ್ನೊವಿಚ್ ವಿರುದ್ಧ 6-4, 2-6, 6-3 ಸೆಟ್‌ಗಳಿಂದ ಜಯ ಸಾಧಿಸಿದರು. ವರ್ಷಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಜಯಿಸುವ ಮೂಲಕ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯೊಂದಿಗೆ ಟೀಕಾಕಾರರ ಬಾಯಿ ಮುಚ್ಚಿ ಸಿದ್ದಾರೆ. ಸೋಮವಾರ ನಡೆದ ಮತ್ತೊಂದು ಮೂರನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಏಳನೇ ಶ್ರೇಯಾಂಕದ ಕರೊಲಿನ್ ಗಾರ್ಸಿಯಾ ಆಸ್ಟ್ರೇಲಿಯದ ಡರಿಯಾ ಗಾವ್ರಿಲೋವಾರನ್ನು 7-5,6-4 ಸೆಟ್‌ಗಳಿಂದ ಮಣಿಸಿದ್ದಾರೆ.
ಗಾರ್ಸಿಯಾ ಮುಂದಿನ ಸುತ್ತಿನಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ. ಕೆರ್ಬರ್ ಅವರು ಎಲೆನಾ ವೆಸ್ನಿನಾರನ್ನು 7-5, 6-2 ಅಂತರದಿಂದ ಮಣಿಸಿದ್ದಾರೆ.







