ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ದಕ್ಷಿಣ ಆಫ್ರಿಕದ ರಬಾಡ ನಂ.1 ಬೌಲರ್

ದುಬೈ, ಮಾ.13: ಆಸ್ಟ್ರೇಲಿಯ ವಿರುದ್ಧ ಪೋರ್ಟ್ ಎಲಿಝಬೆತ್‌ನಲ್ಲಿ ಸೋಮವಾರ ಕೊನೆಗೊಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್‌ಗಳನ್ನು ಕಬಳಿಸಿರುವ ಕಾಗಿಸೊ ರಬಾಡ ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ರಬಾಡ 902 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ರಬಾಡ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್‌ರನ್ನು ಹಿಂದಿಕ್ಕಿ ನಂ.1 ರ‍್ಯಾಂಕಿಗೆ ಲಗ್ಗೆ ಇಟ್ಟಿದ್ದಾರೆ. ರಬಾಡ ಇದೀಗ ಆ್ಯಂಡರ್ಸನ್‌ಗಿಂತ 15 ಅಂಕ ಮುಂದಿದ್ದಾರೆ. ರಬಾಡ 900ಕ್ಕೂ ಅಧಿಕ ಅಂಕ ಪಡೆದ ವಿಶ್ವದ 23ನೇ ಬೌಲರ್. ಫಿಲ್ಯಾಂಡರ್(912), ಶಾನ್ ಪೊಲಾಕ್(1999ರಲ್ಲಿ 909) ಹಾಗೂ ಡೇಲ್ ಸ್ಟೇಯ್ನಾ (2014ರಲ್ಲಿ 909) ಬಳಿಕ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕದ ನಾಲ್ಕನೇ ಬೌಲರ್.
ಎರಡನೇ ಟೆಸ್ಟ್‌ನಲ್ಲಿ ಅಜೇಯ 126 ಹಾಗೂ 28 ರನ್ ಗಳಿಸಿದ್ದ ಎಬಿ ಡಿವಿಲಿಯರ್ಸ್ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಐದು ಸ್ಥಾನ ಭಡ್ತಿ ಪಡೆದು ಏಳನೇ ಸ್ಥಾನಕ್ಕೇರಿದ್ದಾರೆ. ಸ್ಟೀವ್ ಸ್ಮಿತ್ ನಂ.1 ಸ್ಥಾನದಲ್ಲಿ ಮುಂದುವರಿದಿದ್ದು, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.







