ಇನ್ನು ಮುಂದೆ ತೇಜಸ್, ಶತಾಬ್ಧಿ ರೈಲು ಪ್ರಯಾಣ ಬೋರು!
ಹೊಸದಿಲ್ಲಿ, ಮಾ. 13: ಮುಂದಿನ ಬಾರಿ ನೀವು ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರೆ ಸೀಟಿನ ಹಿಂದುಗಡೆ ಅಳವಡಿಸಲಾದ ಎಲ್ಸಿಡಿಯಲ್ಲಿ ಚಲನಚಿತ್ರ ವೀಕ್ಷಿಸಲು, ಆಟ ಆಡಲು, ಹಾಡು ಕೇಳಲು ಸಾಧ್ಯವಾಗಲಾರದು. ಪ್ರಯಾಣಿಕರು ಎಲ್ಸಿಡಿಗೆ ಹಾನಿ ಉಂಟು ಮಾಡುತ್ತಿರುವುದರಿಂದ ಎರಡು ಪ್ರಿಮಿಯಂ ರೈಲುಗಳಲ್ಲಿರುವ ಎಲ್ಸಿಡಿ ಉಪಕರಣಗಳನ್ನು ತೆಗೆಯಲು ರೈಲ್ವೆ ನಿರ್ಧರಿಸಿದೆ.
ಮುಂಬೈ-ಅಹ್ಮದಾಬಾದ್ ಶತಾಬ್ಧಿ ಎಕ್ಸ್ಪ್ರೆಸ್ನಲ್ಲಿ ಇತ್ತೀಚೆಗೆ ಪರಿಚಯಿಸಲಾದ ಸ್ವಾಂಕಿ ಅನುಭೂತಿ ಬೋಗಿಗಳಲ್ಲಿ ಕೂಡ ಎಲ್ಸಿಡಿ ಪರದೆಗಳನ್ನು ಅಳವಡಿಸಲಾಗಿದೆ. ಈ ರೈಲುಗಳಲ್ಲಿ ಅಳವಡಿಸಲಾದ ಎಲ್ಸಿಡಿ ಪರದೆಗಳಿಗೆ ಹಾನಿ ಉಂಟು ಮಾಡಲಾಗಿದೆ. ಹೆಡ್ಫೋನ್ ಕಳವುಗೈಯಲಾಗಿದೆ, ವಿದ್ಯುತ್ ಸ್ವಿಚ್ ತೆಗೆಯಲಾಗಿದೆ. ಎಲ್ಸಿಡಿ ಸೇವೆ ರದ್ದುಪಡಿಸಲು ರೈಲ್ವೆ ಈ ಕಾರಣಗಳನ್ನು ಉಲ್ಲೇಖಿಸಿದೆ.
ಎಲ್ಲ ವಲಯದ ರೈಲ್ವೆಗಳಿಗೆ ಆದೇಶ ನೀಡಲಾಗಿದೆ ಹಾಗೂ ಇದಕ್ಕೆ ಅನುಸಾರವಾಗಿ ಅದು ಕಾರ್ಯಪ್ರವೃತ್ತವಾಗಿವೆ ಹಾಗೂ ಎಲ್ಸಿಡಿ ಪರದೆಗಳನ್ನು ತೆಗೆಯುತ್ತಿವೆ. ‘‘ಫೆಬ್ರವರಿಯಲ್ಲಿ ಆದೇಶ ನೀಡಲಾಗಿತ್ತು ಹಾಗೂ ಎಲ್ಲ ವಲಯದ ರೈಲ್ವೆಗಳು ಎಲ್ಸಿಡಿಗಳನ್ನು ತೆಗೆಯಲು ಆರಂಭಿಸಿವೆ’’ ಎಂದು ರೈಲ್ವೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ರೈಲುಗಳಲ್ಲಿ ಅಳವಡಿಸಲಾದ ಎಲ್ಸಿಡಿಗಳನ್ನು ರೈಲ್ವೆ ತೆಗೆಯುತ್ತಿದೆ. ಇದೇ ಸಂದರ್ಭ ರೈಲುಗಳಲ್ಲಿ ವೈಫೈ ಸೇವೆ ನೀಡಲು ನಿರ್ಧರಿಸಿದೆ. ‘‘ವೈಫೈ ಸೇವೆ ಎಲ್ಲ ರೈಲುಗಳಲ್ಲಿ ಲಭ್ಯವಾಗಲಿದೆ.’’ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ಪ್ರಿಮಿಯಂ ರೈಲುಗಳಲ್ಲಿ ಮಾತ್ರ ಈ ಸೇವೆ ಲಭ್ಯವಿದೆ. ಮುಂಬೈ ಹಾಗೂ ಗೋವಾದ ನಡುವೆ ಸಂಚರಿಸುವ ಮೊದಲ ತೇಜಸ್ ಎಕ್ಸ್ಪ್ರೆಸ್ಗೆ 2017 ಮೇಯಲ್ಲಿ ಹಸಿರು ನಿಶಾನೆ ತೋರಿಸಲಾಗಿತ್ತು. ಈ ರೈಲಿನಲ್ಲಿ ಅಳವಡಿಸಲಾಗಿದ್ದ ಎಲ್ಸಿಡಿ ಪರದೆ ಪ್ರಯಾಣಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.