ತ್ರಿಪುರ ಚುನಾವಣೆ: ಚರಿಲಮ್ ನಲ್ಲಿ ಉಪಮುಖ್ಯಮಂತ್ರಿ ದೇಬ್ ಬರ್ಮನ್ ಗೆ ಜಯ
ಅಗರ್ತಲಾ, ಮಾ.15: ಚರಿಲಮ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತ್ರಿಪುರ ಉಪಮುಖ್ಯಮಂತ್ರಿ ಜಿಷ್ಣು ದೇಬ್ ಬರ್ಮನ್ 25,550 ದಾಖಲೆ ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಆಮೂಲಕ 60 ಸದಸ್ಯ ಬಲದ ಸಂಪುಟದಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು 36ಕ್ಕೆ ಏರಿಸಿಕೊಂಡಿದೆ. 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಫೆಬ್ರವರಿ 18ರಂದು ಮತದಾನ ನಡೆದಿತ್ತು. ಸಿಪಿಐ(ಎಂ) ಅಭ್ಯರ್ಥಿ ರಾಮೇಂದ್ರ ನಾರಾಯಣ ದೇಬ್ಬರ್ಮ ಅವರ ನಿಧನದ ಕಾರಣ ಚರಿಲಮ್ ಕ್ಷೇತ್ರದಲ್ಲಿ ಮತದಾನವನ್ನು ಮುಂದೂಡಲಾಗಿತ್ತು. ಸದ್ಯ ನಡೆದ ಚುನಾವಣೆಯಲ್ಲಿ ದೇಬ್ ಬರ್ಮನ್ 26,580 ಮತಗಳನ್ನು ಗಳಿಸಿದರೆ ಸಿಪಿಐ(ಎಂ)ನ ಪಲಾಶ್ ದೇಬ್ಬರ್ಮ 1,030 ಮತಗಳನ್ನಷ್ಟೇ ಗಳಿಸಲು ಶಕ್ತರಾದರು. ಕಾಂಗ್ರೆಸ್ ಅಭ್ಯರ್ಥಿ ಅರ್ಜುನ್ ದೇಬ್ಬರ್ಮ 775 ಮತಗಳನ್ನು ಪಡೆದರು. ಜನರು ಬಿಜೆಪಿಯನ್ನು ಇಷ್ಟೊಂದು ದೊಡ್ಡ ಅಂತರದಿಂದ ಗೆಲ್ಲಿಸಿರುವುದು ಈಶಾನ್ಯ ರಾಜ್ಯಗಳಲ್ಲಿ ಸಿಪಿಐ(ಎಂ) ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತ್ರಿಪುರ ಬಿಜೆಪಿ ಮುಖ್ಯಸ್ಥ ಸನೀಲ್ ದಿಯೋಧರ್ ತಿಳಿಸಿದ್ದಾರೆ. ಇದೇ ವೇಳೆ, ಸಿಪಿಐ(ಎಂ) ಮತ್ತು ಕಾಂಗ್ರೆಸ್,ಚರಿಲಮ್ನಲ್ಲಿ ಬಿಜೆಪಿ ನಡೆಸಿದ ಹಿಂಸಾಚಾರದಿಂದಾಗಿ ಜನರು ಬಿಜೆಪಿ ವಿರುದ್ಧ ಮತ ಹಾಕಲು ಭಯಪಡುವಂಥ ವಾತಾವರಣ ಸೃಷ್ಟಿಯಾಗಿತ್ತು ಎಂದು ಆರೋಪಿಸಿದ್ದಾರೆ.