ಆರು ವರ್ಷಗಳ ಬಳಿಕ ಶ್ರೀಲಂಕಾಕ್ಕೆ ಇಂಗ್ಲೆಂಡ್

ಕೊಲಂಬೊ,ಮಾ.15: ಇಂಗ್ಲೆಂಡ್ ಕ್ರಿಕೆಟ್ ತಂಡ ಆರು ವರ್ಷಗಳ ಬಳಿಕ ಮೊದಲ ಬಾರಿ ಶ್ರೀಲಂಕಾಕ್ಕೆ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಮೂರು ಟೆಸ್ಟ್, ಐದು ಏಕದಿನ ಹಾಗೂ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 10 ರಂದು ಡಾಂಬುಲ್ಲಾದಲ್ಲಿ ಹಗಲು-ರಾತ್ರಿ ಏಕದಿನ ಪಂದ್ಯ ಆಡುವುದರೊಂದಿಗೆ ಇಂಗ್ಲೆಂಡ್ ತಂಡ ಶ್ರೀಲಂಕಾ ಕ್ರಿಕೆಟ್ ಪ್ರವಾಸ ಆರಂಭಿಸಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. ಮೂರು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯ ಹಗಲು-ರಾತ್ರಿ ಪಂದ್ಯಗಳಾಗಿವೆ. ಮೊದಲ ಟೆಸ್ಟ್ ಪಂದ್ಯವು ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಉಳಿದೆರಡು ಟೆಸ್ಟ್ ಪಂದ್ಯಗಳು ಕ್ಯಾಂಡಿಯ ಪಲ್ಲೆಕಲೆ ಸ್ಟೇಡಿಯಂ ಹಾಗೂ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಂಗ್ಲೆಂಡ್ ತಂಡ 2012ರಲ್ಲಿ ಶ್ರೀಲಂಕಾಕ್ಕೆ ಕೊನೆಯ ಬಾರಿ ಪ್ರವಾಸ ಕೈಗೊಂಡಿದ್ದು, ಆಗ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು.
ಶ್ರೀಲಂಕಾ 2016ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪ್ರವಾಸ ಕೈಗೊಂಡಾಗ 3 ಟೆಸ್ಟ್, 5 ಏಕದಿನ ಹಾಗೂ ಏಕೈಕ ಟ್ವೆಂಟಿ-20 ಪಂದ್ಯ ಆಡಿತ್ತು. ಇಂಗ್ಲೆಂಡ್ ಸರಣಿ ಜಯಿಸಿತ್ತು.





