ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಇರ್ಫಾನ್ ಖಾನ್
ಊಹಾಪೋಹಗಳಿಗೆ ತೆರೆ ಎಳೆದ ನಟ

ಮುಂಬೈ, ಮಾ.16: ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಎದ್ದಿರುವ ಸಾಕಷ್ಟು ಊಹಾಪೋಹಗಳಿಗೆ ತೆರೆ ಎಳೆದಿರುವ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಟ್ವೀಟ್ ಒಂದನ್ನು ಮಾಡಿ ತಾವು 'ನ್ಯೂರೋಎಂಡೋಕ್ರೀನ್ ಟ್ಯೂಮರ್'ನಿಂದ ಬಳಲುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ.
ಈ ಹಿಂದೆ ಮಾರ್ಚ್ 5ರಂದು ಟ್ವೀಟ್ ಮಾಡಿದ್ದ ನಟ ತಾನು ಒಂದು ಅಪರೂಪದ ಕಾಯಿಲೆಯೊಂದರಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಅದೇ ಸಮಯ ಯಾರೂ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಊಹಾಪೋಹ ಸೃಷ್ಟಿಸದಂತೆ ಹಾಗೂ ಹಾಗೂ ಮುಂದಿನ ಒಂದು ವಾರ ಅಥವಾ ಹತ್ತು ದಿನಗಳೊಳಗೆ ವೈದ್ಯಕೀಯ ತಪಾಸಣೆ ಪ್ರಕ್ರಿಯೆ ಪೂರ್ತಿಗೊಂಡ ನಂತರ ಮತ್ತೆ ತಮ್ಮ ಕಥೆಯನ್ನು ಎಲ್ಲರೊಡನೆ ಶೇರ್ ಮಾಡುವುದಾಗಿ ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವುದಾಗಿ ವದಂತಿ ಹಬ್ಬಿತ್ತು.
ಅಂತೆಯೇ ಇಂದು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದ ನಟ, ತಾವು ಮತ್ತೆ ಹೊಸ ಕಥೆಗಳೊಂದಿಗೆ ಬರುವುದಾಗಿ ತಿಳಿಸಿದ್ದಾರೆ. "ಲೈಫ್ ಈಸ್ ಅಂಡರ್ ನೋ ಅಬ್ಲಿಗೇಶನ್ ಟು ಗಿವ್ ಅಸ್ ವಾಟ್ ವಿ ಎಕ್ಸ್ ಪೆಕ್ಟ್'' ಎಂದು ಮಾರ್ಗರೆಟ್ ಮಿಚೆಲ್ ಅವರ ಉಲ್ಲೇಖದೊಂದಿಗೆ ತಮ್ಮ ಟ್ವೀಟ್ ಆರಂಭಿಸಿರುವ ಇರ್ಫಾನ್ "ಅನಿರೀಕ್ಷಿತವಾಗಿರುವುದು ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಕಳೆದ ಕೆಲ ದಿನಗಳಿಂದ ನಾನು ಅರಿತಿದ್ದೇನೆ. ನನಗೆ ನ್ಯೂರೋ ಎಂಡೋಕ್ರೀನ್ ಟ್ಯೂಮರ್ ಇದೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟಕರವಾಗಿದೆ. ಆದರೆ ನನ್ನ ಸುತ್ತಮುತ್ತ ಇರುವವರ ಪ್ರೀತಿ ಮತ್ತು ಧೈರ್ಯ ಹಾಗೂ ನನ್ನೊಳಗಿರುವ ಪ್ರೀತಿ ಮತ್ತು ಧೈರ್ಯ ನನಗೆ ಭರವಸೆಯನ್ನು ನೀಡಿದೆ. ಈ ಪಯಣ ನನ್ನನ್ನು ದೇಶದ ಹೊರಗೆ ಕರೆದೊಯ್ದಿದೆ. ಎಲ್ಲರಿಗೂ ತಮ್ಮ ಹಾರೈಕೆಗಳನು ಕಳುಹಿಸುವಂತೆ ಕೋರುತ್ತಿದ್ದೇನೆ. ಹರಿಯ ಬಿಟ್ಟಂತಹ ವದಂತಿಗಳ ಬಗ್ಗೆ ಹೇಳುವುದಾದರೆ ನ್ಯೂರೋ ಯಾವತ್ತೂ ಮೆದುಳಿಗೆ ಸಂಬಂಧಿಸಿದ ವಿಚಾರವಲ್ಲ ಹಾಗೂ ಗೂಗಲ್ ಮಾಡುವುದು ಸಂಶೋಧನೆಯ ಅತ್ಯಂತ ಸುಲಭ ವಿಧಾನವಲ್ಲ. ನಾನು ಮತ್ತೆ ಹೊಸ ಕಥೆಗಳೊಂದಿಗೆ ಬರುತ್ತೇನೆಂಬ ಆಶಾಭಾವನೆಯಿದೆ'' ಎಂದಿದ್ದಾರೆ.
ಖಾನ್ ಅವರ ಮುಂದಿನ ಚಿತ್ರ `ಬ್ಲ್ಯಾಕ್ ಮೇಲ್' ಎಪ್ರಿಲ್ 6ರಂದು ಬಿಡುಗಡೆಗೊಳ್ಳಲಿದೆ. ಚಿತ್ರ ತಂಡ ಇರ್ಫಾನ್ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿರಿಸಿ ಚಿತ್ರ ಬಿಡುಗಡೆಯನ್ನು ಮಂದೂಡಲು ಬಯಸಿತ್ತಾದರೂ ಇರ್ಫಾನ್ ಮಾತ್ರ ಹಾಗೆ ಮಾಡದಂತೆ ಹೇಳಿದ್ದಾರೆಂದು ನಿರ್ದೇಶಕ ಅಭಿನಯ್ ದಿಯೊ ತಿಳಿಸಿದ್ದಾರೆ.







