ಕೊಳ್ಳೇಗಾಲ: ಮಣ್ಣು ಕುಸಿದು ಕಾರ್ಮಿಕ ಮೃತ್ಯು

ಕೊಳ್ಳೇಗಾಲ, ಮಾ.16: ಮಣ್ಣು ಕುಸಿದು ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟು ಮತ್ತೊರ್ವ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಉಗನಿಯ ಗ್ರಾಮದ ಹೊಸವಾಡಿ ವೀರಭದ್ರಸ್ವಾಮಿ ದೇವಾಲಯದ ಬಳಿಯ ಕಾರ್ಗಳ್ಳಿ ಕೆರೆಯಲ್ಲಿ ಶುಕ್ರವಾರ ನಡೆದಿದೆ.
ಸತ್ತೇಗಾಲ ಗ್ರಾಮವಾಸಿ ಚಂದ್ರು (24) ಮೃತ ಕಾರ್ಮಿಕ. ಗಾಯಗೊಂಡ ಮತ್ತೊರ್ವ ಕೂಲಿಕಾರ್ಮಿಕ ಮಾದೇಶ್‍ನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಉಗನಿಯ ಹೊಸವಾಡಿ ವೀರಭದ್ರಸ್ವಾಮಿ ದೇವಾಲಯದ ಬಳಿಯ ಕಾರ್ಗಳ್ಳಿ ಕೆರೆಯಲ್ಲಿ ಸತ್ತೇಗಾಲ ಗ್ರಾಮದ ಕೂಲಿಕಾರ್ಮಿಕರಾದ ಚಂದ್ರು ಮತ್ತು ಮಾದೇಶ್ ಎಂಬುವವರು ಅದೇ ಗ್ರಾಮದ ಸುಂದರ ಎಂಬುವವರ ಟ್ರಾಕ್ಟರ್ ಗೆ ಮಣ್ಣನ್ನು ತುಂಬುತ್ತಿದ್ದಾಗ ಕೆರೆಯ ಮಣ್ಣು ಚಂದ್ರು ಮೇಲೆ ಕುಸಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಣ್ಣು ಕುಸಿತದಿಂದ ಗಾಯಗೊಂಡ ಮಹೇಶ್‍ನನ್ನು ತಕ್ಷಣ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ತೆರಳಿ ಮೃತನ ಪೋಷಕರಿಂದ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





