ಸರಕಾರಿ ಆಸ್ಪತ್ರೆಗಳಲ್ಲಿ ಹೊರಗಡೆ ಔಷಧಿಗಾಗಿ ಚೀಟಿ ಬರೆದರೆ ಶಿಸ್ತು ಕ್ರಮ: ಸಚಿವ ರಮೇಶ್‍ಕುಮಾರ್

ತುಮಕೂರು,ಮಾ.16: ಯಾವುದೇ ಕಾರಣಕ್ಕೂ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಗಡೆ ಔಷಧಿಗಾಗಿ ಚೀಟಿ ಬರೆಯುವ ವೈದ್ಯರನ್ನು ಅಮಾನತು ಮಾಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
ಮಧುಗಿರಿ ತಾಲೂಕಿನ ಮಿಡಿಗೇಶಿಯಲ್ಲಿಂದು ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆಯನ್ನು ವೈದ್ಯರು ಲಿಖಿತವಾಗಿ ಬರೆದುಕೊಡಬೇಕು. ಆ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಆಗುವ ವೆಚ್ಚವನ್ನು ಸರಕಾರದಿಂದಲೇ ಭರಿಸಲಾಗುತ್ತದೆ ಎಂದರು.
ಬಡವರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ 'ಆರೋಗ್ಯ ಕರ್ನಾಟಕ ಯೋಜನೆ' ಯನ್ನು ಜಾರಿಗೆ ತರಲಾಗಿದೆ. ಮುಖ್ಯಮಂತ್ರಿಗಳಿಂದ ಶಾಸಕರು, ಮಾಜಿ ಶಾಸಕವರೆಗೂ, ಸರಕಾರಿ ನೌಕರರಿಂದ ಸಾಮಾನ್ಯ ಪ್ರಜೆಗಳವರೆಗೂ ಉಚಿತ ಮತ್ತು ಉತ್ತಮ ದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ ಎಂದರು.
ಇಂದು ಮಧುಗಿರಿ, ಹೊಸಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರೊಂದಿಗೆ ಚರ್ಚಿಸಿ 15 ದಿನಕ್ಕೆ ಅಥವಾ ತಿಂಗಳಿಗೊಮ್ಮೆ ಅಗತ್ಯವಿರುವ ಔಷಧಿಗಳ ಬಗ್ಗೆ ಅಂದಾಜು ಮಾಡಿ ಸರಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದರೆ ಕೂಡಲೇ ಒದಗಿಸಲಾಗುವುದು ಎಂದು ಸೂಚನೆ ನೀಡಲಾಗಿದೆ. ಆರೋಗ್ಯಕ್ಕಾಗಿ ಯಾವುದೇ ರೀತಿಯ ಹಣದ ಸಮಸ್ಯೆಯನ್ನು ಸರಕಾರ ಎದುರಿಸುತ್ತಿಲ್ಲ ಎಂದು ಅವರು ತಿಳಿಸಿದರು.
ಬಡವರು ಆಸ್ಪತ್ರೆಯಲ್ಲಿ ಅನುಭವಿಸುವ ಯಾತನೆಯ ಬಗ್ಗೆ ಅರಿತಿರುವ ಕಾರಣ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯ ಸರಕಾರವು ಬಡವರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಸಾಮಾಜದ ಎಲ್ಲ ವರ್ಗದವರಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆಯಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಮಧುಗಿರಿ, ತುಮಕೂರು, ಚಿಕ್ಕಬಳ್ಳಾಪುರದ ಜನರಿಗೆ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನ ಮಾಡಿ 2 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಮಿಡಿಗೇಶಿ ಸುತ್ತಮುತ್ತಲಿನ ಜನರಿಗೆ ಆರೋಗ್ಯ ಸೌಲಭ್ಯವನ್ನು ಒದಗಿಸಲು ನೂತನ ಕಟ್ಟಡವನ್ನು ನಿರ್ಮಿಸಿ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. 1937 ಫೆ. 24 ರಂದು ಬ್ರಿಟಿಷರ ಅವಧಿಯಲ್ಲಿ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 84 ವರ್ಷಗಳ ಇತಿಹಾಸ ಹೊಂದಿರುವ ಈ ಆಸ್ಪತ್ರೆಯು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು 1.63 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಎಚ್‍ಒ ರಂಗಸ್ವಾಮಿ, ಜಿಲ್ಲಾ ಪಂಚಾಯತ್ ಸದಸ್ಯೆ ಜಿ.ಜೆ.ರಾಜಣ್ಣ, ಶಾಂತಲಾ ರಾಜಣ್ಣ, ತಾಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾಕ್ಷಿ ಸುಧಾಕರ್, ಕೊಂಡವಾಡಿ ಚಂದ್ರಶೇಖರ್, ಸ್ಥಳೀಯ ವೈದ್ಯಾಧಿಕಾರಿ ಡಾ. ಅರವಿಂದ್ ರೆಡ್ಡಿ ಸೇರಿದಂತೆ ಮತ್ತಿತರರರು ಹಾಜರಿದ್ದರು.







