ಬೆಳ್ತಂಗಡಿ : ಏಕದಿನ ಪ್ರಾದೇಶಿಕ ವಿಚಾರ ಸಂಕಿರಣ

ಬೆಳ್ತಂಗಡಿ,ಮಾ.16: ಸಮುದಾಯದ ಇಚ್ಛಾ ಶಕ್ತಿ, ಉತ್ತಮ ಯೋಜನೆ ಮತ್ತು ಪ್ರಾಮಾಣಿಕ ನಾಯಕತ್ವ ಇದ್ದರೆ ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಎರಡೇ ವರ್ಷದಲ್ಲಿ ಬಗೆಹರಿಸಬಹುದು ಎಂದು ಅಡಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಹೇಳಿದರು.
ವಿಶ್ವ ಜಲ ದಿನಾಚರಣೆ ಅಂಗವಾಗಿ ಉಜಿರೆ ಶ್ರೀ ಧ.ಮಂ.ಕಾಲೇಜು, ಅಡಿಕೆ ಪತ್ರಿಕೆ, ಜಲಕೂಟ ಮತ್ತು ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಏಕದಿನ ಪ್ರಾದೇಶಿಕ ವಿಚಾರ ಸಂಕಿರಣದಲ್ಲಿ 'ಮಳೆ ಕೊಯ್ಲು: ಏಕೆ ಮತ್ತು ಹೇಗೆ' ಎಂಬುದನ್ನು ಅವರು ವಿವರಿಸಿದರು.
ಒಂದೆರಡು ಮಳೆ ಬಂದ ಕೂಡಲೇ, ಇದೆಂತಹಾ ಮಳೆ ಮಹಾರಾಯ ಎಂದು ಬೇಸರಿಸುವ ಮನೋಭಾವ ಬದಲಾಗಬೇಕು. ಇಂದು ಒಂದೊಂದು ಹನಿಗೂ ಲೆಕ್ಕವಿಟ್ಟು ಜಲ ಸಾಕ್ಷರರಾಗುವ ಅವಶ್ಯಕತೆ ಇದೆ. ಇವತ್ತಿನ ಸನ್ನಿವೇಶದಲ್ಲಿ ಮಳೆಯ ವಿತರಣೆಯಲ್ಲಿ ಏರು ಪೇರಾಗಿದೆ. ಮಲೆನಾಡಿನಲ್ಲಿ ನೀರು ಹರಿಯಲು ಬಿಡದೆ ನೀರು ಇಂಗಲು ಅವಕಾಶಕೊಡಬೇಕು ಎಂದ ಅವರು, ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಚೆನ್ನೈನಲ್ಲಿ ಮಳೆಕೊಯ್ಲನ್ನು ಕಡ್ಡಾಯ ಮಾಡಿದ್ದರಲ್ಲದೆ ಮಾಡದವರಿಗೆ ಶಿಕ್ಷೆಯನ್ನು ವಿಧಿಸಿದ್ದರು. ಇದರ ಪರಿಣಾಮವಾಗಿ ಇಂದು ಅಲ್ಲಿ ಮೇಲು ನೀರು ಅಧಿಕವಾಗಿದೆಯಲ್ಲದೆ ಈಗ ಬಾವಿ ತೆಗೆಯುವ ಪರಂಪರೆ ಮತ್ತೆ ಆರಂಭವಾಗಿರುವುದನ್ನು ವಿವರಿಸಿದರು.
ಮಳೆಗಾಲದಲ್ಲಿ ನೀರು ಮೆಲ್ಮಣ್ಣನ್ನು ಕೊಚ್ಚಿಕೊಂಡು ಹೋದರೆ ಕೃಷಿಗೆ ಹೆಚ್ಚೆಚ್ಚು ಗೊಬ್ಬರ ಹಾಕಬೇಕಾಗುತ್ತದೆ. ಕೊಚ್ಚಿ ಹೋದ ಮಣ್ಣು ಹೂಳಾಗುತ್ತದೆ. ಹೂಳಿನಲ್ಲಿ ನೀರು ಇಂಗುವುದಿಲ್ಲ. ಇಂತಹ ಪರಿಸ್ಥಿತಿ ಸೃಷ್ಟಿಯಾಗಲು ಕಾಡು ನಾಶವಾಗುತ್ತಿರುವುದೇ ಕಾರಣ ಎಂದ ಪಡ್ರೆ ಸಮುದಾಯ ಒಂದಾಗಿ ವಿವಿಧ ರೀತಿಯಲ್ಲಿ ನೀರನ್ನು ಕುಗ್ಗಿಸಿದೆ, ಅದೇ ರೀತಿಯಲ್ಲಿ ಹಿಗ್ಗಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಬಳಿಕ ರಾಜಾಸ್ಥಾನದ ಗೋವಿಂದ ಭಾಯಿ ಮತ್ತು ಶಂಕರ್ ಅವರು ಅಡ್ಡಬೋರು ಮತ್ತು ಇಂಗುಬಾವಿ ವಿಧಾನಗಳನ್ನು ಪರಿಚಯಿಸಿ ಸಂವಾದ ನಡೆಸಿದರು. ಕಾಲೇಜಿನ ವಿದ್ಯಾರ್ಥಿಗಳು ಮಳೆಕೊಯ್ಲು ಮಾದರಿ ಪ್ರಾತ್ಯಕ್ಷಿಕೆ ಹಾಗೂ ಸುಜಲಾಂ ಕಾರ್ಯಕ್ರಮ, ಹಾಗು ನೀರಿಗಾಗಿ ಪ್ರಕೃತಿ ಸಹಜ ಪರಿಹಾರಗಳು ಮತ್ತು ಈ ವರ್ಷದ ವಿಶ್ವ ಜಲದಿನದ ಘೋಷವಾಕ್ಯದ ಬಗ್ಗೆ ಕಾರ್ಯಕ್ರಮ ನಡೆಸಿದರು.
ವಿಚಾರಸಂಕಿರಣದಲ್ಲಿ ವಿದ್ಯಾರ್ಥಿಗಳಲ್ಲದೆ ತಾಲೂಕಿನ ವಿವಿದೆಡೆಯ ಕೃಷಿಕರು ಭಾಗವಹಿಸಿದ್ದು ತಮ್ಮ ಸಮಸ್ಯೆಗಳನ್ನು ಚರ್ಚಿ ಪರಿಹಾರ ಕಂಡುಕೊಂಡರು. ರಾ.ಸೇ.ಯೋಜನೆಯ ಯೋಜನಾಧಿಕಾರಿ ಗಣೇಶ್ ಶೆಂಡ್ಯೆ ಸ್ವಾಗತಿಸಿದರು.
ಓಡೋ ನೀರನ್ನು ನಡೆಯುವ ಹಾಗೆ ಮಾಡಿ, ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ, ತೆವಳುವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ
- ಶ್ರೀಪಡ್ರೆ







